ಸಂಡೂರು/ಬಳ್ಳಾರಿ: ತಾಲೂಕಿನ ನರಸಿಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎನ್‌ಎಮ್‌ಡಿಸಿ ಕೈಗಾರಿಕಾ ವಾಷಿಂಗ್ ಪ್ಲಾಂಟ್ ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮುಂಚಿತವಾಗಿ ದೆಹಲಿಯಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗಿತ್ತು. ಇದರ ಬೆನ್ನಲ್ಲೇ ಎನ್‌ಎಮ್‌ಡಿಸಿ ಆಡಳಿತ ಮಂಡಳಿಯು ಮುಂದಿನ ತಿಂಗಳಿಂದ ಕಾರ್ಮಿಕರ ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದೆ ಎಂದು ಅಖಂಡ ಬಳ್ಳಾರಿ ಜಿಲ್ಲೆಯ ಸಂಸದ ಈ. ತುಕಾರಾಂ ತಿಳಿಸಿದ್ದಾರೆ.

ಮಂಗಳವಾರ ಎನ್‌ಎಮ್‌ಡಿಸಿ ಕೈಗಾರಿಕಾ ಕಾರ್ಖಾನೆಗೆ ಭೇಟಿ ನೀಡಿದ ಸಂಸದ ಈ. ತುಕಾರಾಂ ಅವರು ನೆರೆದಿದ್ದ ಕಾರ್ಮಿಕರೊಂದಿಗೆ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕರ ವೇತನ ಹೆಚ್ಚಳದ ಜೊತೆಗೆ ಅವರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸುವುದಾಗಿಯೂ ಎನ್‌ಎಮ್‌ಡಿಸಿ ಆಡಳಿತ ಮಂಡಳಿ ತಿಳಿಸಿದೆ ಎಂದು ಹೇಳಿದರು.

ಕಾರ್ಮಿಕರ ಹಿತಾಸಕ್ತಿ ಹಾಗೂ ಅವರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳು ಹಾಗೂ ನ್ಯಾಯಯುತ ಹಕ್ಕುಗಳು ದೊರೆಯುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಲಾಗುವುದು ಎಂದು ಸಂಸದ ಈ. ತುಕಾರಾಂ ಭರವಸೆ ನೀಡಿದರು.

ವಾರ್ತಾಭಾರತಿ ವರದಿ ಬೆನ್ನಲ್ಲೇ ಕ್ರಮದ ಭರವಸೆ :

ಎನ್‌ಎಮ್‌ಡಿಸಿ ವಾಷಿಂಗ್ ಪ್ಲಾಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸೆ.23ರಂದು ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ನಿಗದಿತ ವೇತನ ಹಾಗೂ ಇತರ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂಬ ಕಾರ್ಮಿಕರ ಆರೋಪಗಳೂ ವರದಿಯಲ್ಲಿ ಉಲ್ಲೇಖವಾಗಿದ್ದವು.

ಈ ವರದಿಯ ಬೆನ್ನಲ್ಲೇ ಸಂಸದ ಈ. ತುಕಾರಾಂ ಅವರು ಕಾರ್ಮಿಕರ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಇದೀಗ NMDC ಆಡಳಿತ ಮಂಡಳಿಯಿಂದ ವೇತನ ಹೆಚ್ಚಳ ಹಾಗೂ ಬಸ್ ಸೌಲಭ್ಯ ಕಲ್ಪಿಸುವ ಭರವಸೆ ದೊರೆತಿದೆ ಎಂದು ತಿಳಿಸಿದರು.

ಕಾರ್ಮಿಕರ ಬಹುಕಾಲದ ಬೇಡಿಕೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದ್ದು, ಆಡಳಿತ ಮಂಡಳಿಯು ನೀಡಿರುವ ಭರವಸೆಯನ್ನು ಶೀಘ್ರ ಜಾರಿಗೆ ತರಬೇಕು ಎಂದು ಕಾರ್ಮಿಕರು ಆಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor