Ballari | ‘ಸೇವಾ ಸೇತು’ ಕಾರ್ಯಕ್ರಮದಲ್ಲಿ ಸೌರ ಮೇಲ್ಛಾವಣಿ ನೋಂದಣಿ ಶಿಬಿರ
ಬಳ್ಳಾರಿ/ಕಂಪ್ಲಿ: ತಾಲೂಕಿನಾದ್ಯಂತ ಅ.5, 6 ಮತ್ತು 7ರಂದು ಆಯೋಜಿಸಿರುವ ‘ಸೇವಾ ಸೇತು’ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪಿ.ಎಂ. ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ ಅಡಿಯಲ್ಲಿ ಸೋಲಾರ್ ರೂಫ್‌ಟಾಪ್ (ಮೇಲ್ಛಾವಣಿ ಸೌರ ವಿದ್ಯುತ್ ಘಟಕ) ಅಳವಡಿಕೆಗೆ ಸ್ಥಳದಲ್ಲೇ ನೋಂದಣಿ ಹಾಗೂ ಮಾರ್ಗದರ್ಶನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವುದರಿಂದ ಮಾಸಿಕ ವಿದ್ಯುತ್ ಬಿಲ್ ಗಣನೀಯವಾಗಿ ಕಡಿತಗೊಳ್ಳಲಿದ್ದು, ಬಹುತೇಕ ಶೂನ್ಯ ಬಿಲ್ ಪಡೆಯುವ ಅವಕಾಶವಿದೆ. ಯೋಜನೆಯಡಿ ಕೇಂದ್ರ ಸರ್ಕಾರದಿಂದ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ (ಡಿಬಿಟಿ) ಸಬ್ಸಿಡಿ ಜಮೆಯಾಗಲಿದೆ. 1 ಕಿಲೋವ್ಯಾಟ್ ಘಟಕಕ್ಕೆ 30 ಸಾವಿರ ರೂ., 2 ಕಿಲೋವ್ಯಾಟ್‌ಗೆ 60 ಸಾವಿರ ರೂ. ಹಾಗೂ 3 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಘಟಕಕ್ಕೆ ಗರಿಷ್ಠ 78 ಸಾವಿರ ರೂ. ವರೆಗೆ ಸಬ್ಸಿಡಿ ದೊರೆಯಲಿದೆ.
ಉತ್ಪಾದನೆಯಾದ ವಿದ್ಯುತ್ ಅನ್ನು ಸ್ವಂತ ಬಳಕೆಯ ನಂತರ ಉಳಿದಲ್ಲಿ, ನೆಟ್ ಮೀಟರ್ ಮೂಲಕ ಗ್ರಿಡ್‌ಗೆ ಸರಬರಾಜು ಮಾಡಿ ಹೆಚ್ಚುವರಿ ಆದಾಯ ಗಳಿಸಬಹುದಾಗಿದೆ. ಸೋಲಾರ್ ಘಟಕ ಅಳವಡಿಕೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವೂ ಲಭ್ಯವಿದೆ.
ನೋಂದಣಿಗೆ ಇತ್ತೀಚಿನ ವಿದ್ಯುತ್ ಬಿಲ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮೇಲ್ಛಾವಣಿಯ ಹಕ್ಕಿನ ದಾಖಲೆ ಅಥವಾ ಕಂದಾಯ ರಸೀದಿ ತರಬೇಕು. ಕಂಪ್ಲಿ ಉಪವಿಭಾಗದ ಎಲ್ಲ ವಿದ್ಯುತ್ ಗ್ರಾಹಕರು ಮೂರು ದಿನಗಳ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 9449597416 ಅನ್ನು ಸಂಪರ್ಕಿಸಬಹುದು ಎಂದು ಜೆಸ್ಕಾಂ ಕೋರಿದೆ.