Ballari | ಗಣಿ ಲಾರಿಗಳ ಸಾರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಕ್ಯೂಆರ್ ಕೋಡ್
ಸಂಡೂರು/ಬಳ್ಳಾರಿ: ಗಣಿ ಲಾರಿಗಳ ಸಾರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಸುಗಮತೆ ತರಲು ಕ್ಯೂಆರ್ ಕೋಡ್ ಅಳವಡಿಕೆ ಮತ್ತು ಲಾರಿ ಸಾಗಣೆ ದರ ನಿಗದಿ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು, ಲಾರಿ ಮಾಲಕರು ಮತ್ತು ಮ್ಯಾನೇಜರ್‌ಗಳ ಸಭೆ ನಡೆಯಿತು.
ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಆವರಣದಲ್ಲಿ ನಡೆದ ಸಭೆಯಲ್ಲಿ ಸಿಪಿಐ ಮಹೇಶ್ ಗೌಡ, ಅರಣ್ಯ ಇಲಾಖೆಯ ಮಂಜುನಾಥ್, ಡಿಎಂಜಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಲಾರಿ ಮಾಲೀಕರು ಹಾಗೂ ಗಣಿ ಕಂಪನಿಗಳ ಮ್ಯಾನೇಜರ್‌ಗಳು ಭಾಗವಹಿಸಿದ್ದರು.
ಸಭೆಯಲ್ಲಿ ಗಣಿ ಲಾರಿಗಳಿಗೆ ಕ್ಯೂಆರ್ ಕೋಡ್ ಅಳವಡಿಸುವ ಕುರಿತು ವಿಸ್ತೃತ ಚರ್ಚೆ ನಡೆಯಿತು. ಲಾರಿಗೆ ನೀಡಲಾಗುವ ಕ್ಯೂಆರ್ ಕೋಡ್ ಸರಕು ಸಂಪೂರ್ಣವಾಗಿ ಅನ್‌ಲೋಡ್ ಆಗುವವರೆಗೆ ಮಾನ್ಯವಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದಲ್ಲದೆ, ಲಾರಿ ಮಾಲೀಕರಿಗೆ ಅನುಕೂಲವಾಗುವಂತೆ ಯಾವ ಮೈನಿಂಗ್ ಟನ್‌ಗೆ ಎಷ್ಟು ದರ ನಿಗದಿಯಾಗಲಿದೆ ಎಂಬ ಮಾಹಿತಿಯನ್ನು 24 ಗಂಟೆಗಳ ಮುಂಚಿತವಾಗಿಯೇ ಮೊಬೈಲ್ ಸಂದೇಶದ ಮೂಲಕ ತಿಳಿಸುವ ವ್ಯವಸ್ಥೆ ಕಲ್ಪಿಸುವ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಕ್ಯೂಆರ್ ಕೋಡ್ ವ್ಯವಸ್ಥೆ ಹಾಗೂ ಮುಂಚಿತವಾಗಿ ದರದ ಮಾಹಿತಿ ನೀಡುವ ಕ್ರಮದಿಂದ ಗಣಿ ಲಾರಿಗಳ ಸಾರಿಗೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಲಿದ್ದು, ದರ ಹಾಗೂ ಸಾಗಣೆ ಕುರಿತ ಗೊಂದಲಗಳನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಲಾರಿ ಮಾಲೀಕರು ಹಾಗೂ ಮ್ಯಾನೇಜರ್‌ಗಳು ತಮ್ಮ ಸಲಹೆ-ಸೂಚನೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಸಂಬಂಧಿಸಿದ ಅಧಿಕಾರಿಗಳು ಅವುಗಳನ್ನು ಆಲಿಸಿ, ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.