ಬಳ್ಳಾರಿ: ಸರ್ಕಾರಿ ನೌಕರರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ಸಾರ್ವಜನಿಕರಿಗೆ ಪರಿಣಾಮಕಾರಿ ಹಾಗೂ ಚುರುಕಾದ ಸೇವೆ ನೀಡಲು ಸಾಧ್ಯ. ಹೀಗಾಗಿ ನೌಕರರ ಆರೋಗ್ಯ ಕಾಪಾಡುವುದು ಪ್ರಮುಖ ಧ್ಯೇಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮುಹಮ್ಮದ್ ಹಾರೀಸ್ ಸುಮೇರ್ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಆರೋಗ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ನೌಕರನು ತನ್ನ ಕುಟುಂಬದ ಪ್ರಮುಖ ಆಧಾರಸ್ತಂಭವಾಗಿರುತ್ತಾರೆ. ಕರ್ತವ್ಯದ ಒತ್ತಡದ ನಡುವೆ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಪಡೆಯದಿದ್ದರೆ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನೌಕರರ ಆರೋಗ್ಯ ಮತ್ತು ಕಲ್ಯಾಣದ ದೃಷ್ಟಿಯಿಂದ ಶಿಬಿರ ಆಯೋಜಿಸಲಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಯುವಕರು ಹಾಗೂ ನೌಕರರಲ್ಲಿ ಹೃದಯಾಘಾತ, ರಕ್ತದೊತ್ತಡ, ಪಾರ್ಶ್ವವಾಯು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಇಂತಹ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲು ಆರೋಗ್ಯ ತಪಾಸಣೆ ಅತ್ಯಗತ್ಯ. ನೌಕರರು ಆರೋಗ್ಯವಾಗಿದ್ದರೆ ಮಾತ್ರ ಸಾರ್ವಜನಿಕರಿಗೆ ಉತ್ಸಾಹದಿಂದ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಹೇಳಿದರು.

ಶಿಬಿರದ ಅಂಗವಾಗಿ ಪಿಡಿಒ ಸಂಘದ ವತಿಯಿಂದ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದ್ದು, ಸಂಗ್ರಹವಾಗುವ ರಕ್ತವನ್ನು ಜಿಲ್ಲಾ ಆಸ್ಪತ್ರೆ ಅಥವಾ ಬಿಎಂಸಿಆರ್‌ಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯ ವತಿಯಿಂದ ಶಿಬಿರದಲ್ಲಿ 17 ಪ್ರತ್ಯೇಕ ತಪಾಸಣಾ ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಮನೋವೈದ್ಯಕೀಯ, ಚರ್ಮರೋಗ, ಇಸಿಜಿ, ಎಕ್ಸ್‌ರೇ, ಕ್ಷಯರೋಗ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಆಯುಷ್ ಇಲಾಖೆಯ ವತಿಯಿಂದ ನ್ಯಾಚುರೋಪತಿ ಸೇರಿದಂತೆ ಪರ್ಯಾಯ ಚಿಕಿತ್ಸಾ ಸೌಲಭ್ಯಗಳನ್ನೂ ಒದಗಿಸಲಾಗಿತ್ತು.

ಇದಕ್ಕೂ ಮುನ್ನ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ವಿವಿಧ ತಪಾಸಣಾ ಕೌಂಟರ್‌ಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಧಿಕಾರಿ-ಸಿಬ್ಬಂದಿಗೆ ಮಾದರಿಯಾಗುವಂತೆ ಸ್ವತಃ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ಸೇರಿದಂತೆ ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಬಳಿಕ ಸಿಬ್ಬಂದಿಯಿಂದ ಮಾಹಿತಿ ಪಡೆದು, ಶಿಬಿರಕ್ಕೆ ಆಗಮಿಸುವವರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಿ ಉತ್ತಮ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಆಲಕಾನಂದ ಡಿ. ಮಳಗಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್. ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ., ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಇಂದ್ರಾಣಿ ವಿ., ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಹನುಮಂತಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಜಿಪಂ ಅಧಿಕಾರಿ-ಸಿಬ್ಬಂದಿ ಹಾಗೂ ಆರೋಗ್ಯ ಮತ್ತು ಆಯುಷ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor