ಬಳ್ಳಾರಿ ಗುಂಪು ಘರ್ಷಣೆ | ಹಲ್ಲೆ ನಡೆಸಿ ನನ್ನನ್ನು ಕೊಲ್ಲುವ ಪ್ರಯತ್ನ: ಜನಾರ್ಧನ ರೆಡ್ಡಿ
ಕಾರ್ಯಕರ್ತನ ಸಾವಿಗೆ ಶಾಸಕ ಭರತ್ ರೆಡ್ಡಿ ಕಾರಣ: ಶ್ರೀರಾಮುಲು ಆರೋಪ
ಬಳ್ಳಾರಿ, ಜ.2: ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ರೆಡ್ಡಿ ಬಣಗಳ ನಡುವೆ ನಡೆದ ಘರ್ಷಣೆ ಕುರಿತಂತೆ ಮಾಜಿ ಸಚಿವರಾದ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಶ್ರೀರಾಮುಲು, ಅಮಾಯಕ ರಾಜಶೇಖರ್ ರೆಡ್ಡಿ ಗುಂಡಿನ ಏಟಿಗೆ ಸಾವಾಗಿರೋದು ತುಂಬಾ ನೋವಿನ ಸಂಗತಿ. ನಮ್ಮ ಪಕ್ಷದ ಕಡೆಯಿಂದ ಮತ್ತು ನನ್ನ ಕಡೆಯಿಂದ ವೈಯಕ್ತಿಕವಾಗಿ ಅವರ ಕುಟುಂಬಕ್ಕೆ ಯಾವತ್ತಿಗೂ ಬೆಂಬಲವಿರುತ್ತದೆ ಎಂದು ಹೇಳಿದ್ದಾರೆ.
ರಾಜಶೇಖರ್ ರೆಡ್ಡಿ ಸಾವಿಗೆ ಶಾಸಕ ನಾರಾ ಭರತ್ ರೆಡ್ಡಿ ಕಾರಣ ಎಂದು ಆರೋಪಿಸಿದ ಶ್ರೀರಾಮುಲು, ಶಾಸಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ರಾಜಶೇಖರ್ ರೆಡ್ಡಿಗೆ ತಗಲಿರುವ ಗುಂಡು ಯಾರದು ಎಂದು ಪತ್ತೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ನಾವು ಕಾನೂನು ಹೋರಾಟಕ್ಕೆ ಸಿದ್ಧ, ನಮ್ಮ ಮನೆಯ ಹತ್ತಿರ ಬಂದು ಜಗಳ ತೆಗೆಯುವ ಅವಶ್ಯಕತೆ ಏನಿತ್ತು? ಬಿಯರ್ ಬಾಟಲ್‌ಗಳಲ್ಲಿ ಪೆಟ್ರೋಲ್ ಹಾಕಿಕೊಂಡು ಕಲ್ಲುಗಳನ್ನು ಆಟೋದಲ್ಲಿ ಇಟ್ಕೊಂಡು ನಮ್ಮನ್ನು ಹೊಡೆಯುವುದಕ್ಕೆ ಸಂಚು ರೂಪಿಸಿ ಬಂದಿದ್ದಾರೆ. ಜನಾರ್ಧನ ರೆಡ್ಡಿ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಗಂಗಾವತಿ ಕ್ಷೇತ್ರ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಮಾತನಾಡಿ, ಗುರುವಾರ ರಾತ್ರಿ ನಡೆದ ಘಟನೆಯಿಂದ ನನ್ನ ಜೀವಕ್ಕೆ ಅಪಾಯ ಇದೆ ಎಂದು ನನಗೆ ಗೊತ್ತಾಗಿದೆ. ನನ್ನ ಮೇಲೆ ಹಲ್ಲೆ ಮಾಡುವ ಮೂಲಕ ನನ್ನನ್ನು ಕೊಲ್ಲುವ ಪ್ರಯತ್ನ ನಡೆದಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿಯವರ ಮೇಲೆ ಆರೋಪ ಮಾಡಿದರು.
ಮಾಜಿ ಸಚಿವರಾದ ಸೋಮಶೇಖರ್ ರೆಡ್ಡಿ, ಬಿಜೆಪಿ ಬಳ್ಳಾರಿ ಜಿಲ್ಲಾ ಅಧ್ಯಕ್ಷರು ಮತ್ತು ಕಾರ್ಯಕರ್ತರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಅವಂಬಾವಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಗುರುವಾರ ರಾತ್ರಿ ರೆಡ್ಡಿ ಬಣಗಳ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡು ತಗುಲಿ ಮೃತಪಟ್ಟಿದ್ದರು. ಘಟನೆ ಸಂಬಂಧ ಒಂದು ಸುಮೋಟೋ ಸೇರಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಮ್ಮ ಕಾರ್ಯಕರ್ತನ ಸಾವಾಗಿದೆ. ನಾವು ದುಃಖ ದಲ್ಲಿದ್ದೇವೆ. ಬಳ್ಳಾರಿಯಲ್ಲಿ ಮೊದಲಿನಿಂದಲೂ ರಾಕ್ಷಸರ ಅಟ್ಟಹಾಸ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ವಿಷಯದ ಗಮನ ಬೇರೆಡೆ ಸೆಳೆೆಯಲು ಜನಾರ್ಧನ ರೆಡ್ಡಿ ಇಂತಹ ನೀಚ ಕೃತ್ಯಕ್ಕೆ ಇಳಿದಿದ್ದಾರೆ. ಮೃತಪಟ್ಟ ರಾಜಶೇಖರ್ ರೆಡ್ಡಿ ನಮ್ಮ ಪಕ್ಷದ ಕಾರ್ಯಕರ್ತ ಮಾತ್ರವಲ್ಲ, ನನ್ನ ಆಪ್ತ ಕೂಡಾ ಹೌದು. ನಾನು ನನ್ನ ತಮ್ಮನನ್ನು ಕಳೆದುಕೊಂಡಿದ್ದೇನೆ ಎಂದು ಅನಿಸುತ್ತಿದೆ. ನಾವು ಆತನ ಕುಟುಂಬಸ್ಥರ ದುಃಖದಲ್ಲಿ ಭಾಗಿಯಾಗುತ್ತೇವೆ. ನಾವು 14 ಜನ ಶಾಸಕರು ಸೇರಿಕೊಂಡು ದೊಡ್ಡ ಮಟ್ಟದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಮಾಡಬೇಕಾಗಿತ್ತು. ದುಃಖದ ವಾತಾವರಣ ಇರುವ ಕಾರಣ ನಾವು ಈ ಕಾರ್ಯಕ್ರಮವನ್ನು ಮುಂದೂಡುತ್ತಿದ್ದೇವೆ. ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಆಚರಿಸುತ್ತೇವೆ.
-ನಾರಾ ಭರತ್ ರೆಡ್ಡಿ, ಬಳ್ಳಾರಿ ಶಾಸಕ
ಘರ್ಷಣೆ ಹಿನ್ನೆಲೆ: ವಾಲ್ಮೀಕಿ ಪ್ರತಿಮೆ ಅನಾವರಣ ತಾತ್ಕಾಲಿಕ ಮುಂದೂಡಿಕೆ :
ಬಳ್ಳಾರಿ: ನಗರದಲ್ಲಿ ನಡೆಯಬೇಕಿದ್ದ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘರ್ಷಣೆ ನಂತರ ಸೂತಕದ ಛಾಯೆ ಆವರಿಸಿರುವ ಕಾರಣ ಹಾಗೂ ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ಉದ್ದೇಶಿತ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರ ನೇತೃತ್ವದಲ್ಲೇ ಈ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಈ ವೇಳೆ, ಮಾಜಿ ಸಚಿವರ ವಿರುದ್ಧ ಹರಿಹಾಯ್ದ ಅವರು, ಜನಾರ್ದನ ರೆಡ್ಡಿ ಅವರು ಇಂದಿಗೂ ಬಳ್ಳಾರಿಯನ್ನು ‘ರಿಪಬ್ಲಿಕ್ ಆಫ್ ಬಳ್ಳಾರಿ’ ಎಂದು ಭಾವಿಸಿದಂತಿದೆ. ಆದರೆ ನಮ್ಮ ಆಡಳಿತದಲ್ಲಿ ಅಂತಹ ವ್ಯವಸ್ಥೆಗೆ ಅವಕಾಶವಿಲ್ಲ. ಇಲ್ಲಿನ ಜನರು ಯಾರ ದಬ್ಬಾಳಿಕೆಗೂ ಬಲಿಯಾಗುವುದಿಲ್ಲ ಎಂದು ಹೇಳಿದರು.