×
Ad

Ballari | ಕಂಪ್ಲಿ ಸಮೀಪ ಗೋನಾಳು ಗ್ರಾಮದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

Update: 2026-06-15 20:04 IST

ಬಳ್ಳಾರಿ/ಕಂಪ್ಲಿ: ತಾಲ್ಲೂಕಿನ ಗೋನಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಎರಡು ದಿನಗಳ ಹಿಂದೆ ಮುಳ್ಳು ಕಂಟಿ ತೆರವು ಕಾರ್ಯಾಚರಣೆ ವೇಳೆ ಮಣ್ಣಿನಲ್ಲಿ ಹೂತು ಹೋಗಿದ್ದ ಐತಿಹಾಸಿಕ ಶಾಸನ ಪತ್ತೆಯಾಗಿದೆ.

ಸುಮಾರು 8 ಅಡಿ ಉದ್ದ ಹಾಗೂ ಎರಡುವರೆ ಅಡಿ ಅಗಲದ ಈ ಕಲ್ಲು ಶಾಸನದಲ್ಲಿ ಆರು ಸಾಲುಗಳ ಬರಹ ಹಾಗೂ ತ್ರಿಶೂಲ, ಈಶ್ವರ, ನಂದಿ, ಸೂರ್ಯ–ಚಂದ್ರ ಸೇರಿದಂತೆ ವಿವಿಧ ಚಿತ್ರಗಳು ಕೆತ್ತಲಾಗಿದೆ. ಗೋವಿನ ಚಿತ್ರವೂ ಇದ್ದು, ಅದು ಭಾಗಶಃ ಹಾನಿಗೊಂಡಿರುವುದಾಗಿ ತಿಳಿದುಬಂದಿದೆ.

ಪತ್ತೆಯಾದ ಶಾಸನವು 16ನೇ ಶತಮಾನದ ವಿಜಯನಗರ ಕಾಲಕ್ಕೆ ಸೇರಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಶಾಸನದ ಕೆಳಭಾಗದಲ್ಲಿ ಹಂಪಿ ವಿರೂಪಾಕ್ಷ ದೇವರಿಗೆ ಸಂಬಂಧಿಸಿದ ಗೋನಾಳು (ಗುಣಹಾಳು) ಗ್ರಾಮವನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂಬ ಉಲ್ಲೇಖವಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಮಾತನಾಡಿದ ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಜೀರಿಗನೂರು ಕೆ. ಆಂಜಿನೇಯ, ಈ ಶಾಸನವು ಈಗಾಗಲೇ 1997ರಲ್ಲಿ ಮೈಸೂರಿನ ಡೈರೆಕ್ಟೋರೇಟ್ ಆಫ್ ಆರ್ಕಿಯಾಲಜಿ ಆಂಡ್ ಮ್ಯೂಸಿಯಮ್ಸ್ ಪ್ರಕಟಿಸಿದ “Inscriptions of Ballari District” ಗ್ರಂಥದಲ್ಲಿಯೂ ದಾಖಲಾಗಿರುವುದಾಗಿ ತಿಳಿಸಿದ್ದಾರೆ.

ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ ಅವರ ಪ್ರಕಾರ, ಗೋನಾಳು ಗ್ರಾಮವನ್ನು ಹಂಪಿ ವಿರೂಪಾಕ್ಷ ದೇವರಿಗೆ ದಾನವಾಗಿ ನೀಡಲಾಗಿದ್ದು, ಅದನ್ನು ಸೂಚಿಸುವ ನಾಮಫಲಕ ರೀತಿಯ ಶಾಸನ ಇದಾಗಿದೆ.

ಪತ್ತೆಯಾದ ಐತಿಹಾಸಿಕ ಶಾಸನವನ್ನು ಸಂರಕ್ಷಿಸಿ ಸೂಕ್ತ ಅಧ್ಯಯನಕ್ಕೆ ಒಳಪಡಿಸಬೇಕೆಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News