Ballari | ಸಂಡೂರಿನಲ್ಲಿ ಹಿರಿಯ ನಾಗರಿಕರು–ಬಾಲ ಕಾರ್ಮಿಕರ ಕುರಿತು ಜಾಗೃತಿ ದಿನಾಚರಣೆ
ಸಂಡೂರು/ಬಳ್ಳಾರಿ: ತಾಲೂಕು ಆಡಳಿತ, ತಾಲೂಕು ಪಂಚಾಯತ್, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ವಕೀಲರ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರಿಕರ ದೌರ್ಜನ್ಯದ ವಿರುದ್ಧ ಜಾಗೃತಿ ದಿನಾಚರಣೆ–2026 ಹಾಗೂ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ–2026 ಕಾರ್ಯಕ್ರಮವನ್ನು ಸೋಮವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರೇಡ್–2 ತಹಶೀಲ್ದಾರರಾದ ಶ್ರೀಮತಿ ಸುಧಾ, ಹಿರಿಯ ನಾಗರಿಕರಿಗೆ ಗೌರವ ನೀಡುವುದು ಹಾಗೂ ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು. ಸಾರ್ವಜನಿಕರ ಹಿತಾಸಕ್ತಿಗಾಗಿ ತಾಲೂಕು ಆಡಳಿತ ಸದಾ ಬದ್ಧವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲ ಡಿ. ನಾಗರಾಜ, ಹಿರಿಯ ನಾಗರಿಕರ ಪಾಲನೆ–ಪೋಷಣೆ ಕುರಿತ ಕಾನೂನುಗಳ ಬಗ್ಗೆ ವಿವರಿಸಿ, ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಮಿಕ ನಿರೀಕ್ಷಕ ಮಂಜುನಾಥ ತೊಂಡಿಹಾಳ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸುವುದು ಕಾನೂನುಬಾಹಿರವಾಗಿದ್ದು, ಬಾಲ ಕಾರ್ಮಿಕರನ್ನು ದುಡಿಸಿಕೊಂಡರೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು. ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದ ಮೂಲ ಕರ್ತವ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಮಹ್ಮದ್ ಶಾಯಿಜ್ ಚೌತಾಯಿ, ವಕೀಲರ ಸಂಘದ ಅಧ್ಯಕ್ಷ ಅರಳಿ ಮಲ್ಲಪ್ಪ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ್‌ಗೌಡ, ತಾಲೂಕು ವೈದ್ಯಾಧಿಕಾರಿ ಡಾ. ವಿರೇಂದ್ರ, ಪಶುವೈದ್ಯ ಡಾ. ವಲಿಬಾಷಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಹಕ್ಕುಗಳು ಹಾಗೂ ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸಲಾಯಿತು.