×
Ad

Ballari | ಕಂಪ್ಲಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ದಲಿತ ಸಂಘರ್ಷ ಸಮಿತಿ ಮನವಿ

Update: 2026-06-12 20:07 IST

ಕಂಪ್ಲಿ (ಬಳ್ಳಾರಿ): ಪಟ್ಟಣದಲ್ಲಿ ಬೀದಿ ದೀಪ, ಶೌಚಾಗೃಹ, ಕುಡಿಯುವ ನೀರು ಹಾಗೂ ರಸ್ತೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಬುದ್ಧ, ಬಸವ, ಅಂಬೇಡ್ಕರ್ ವಾದ) ಪದಾಧಿಕಾರಿಗಳು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಕರಡಿ ವಲಿಸಾಬ್ ಅವರ ಸಮ್ಮುಖದಲ್ಲಿ ತಾಲೂಕು ಅಧ್ಯಕ್ಷ ಸಿ. ಬಸವರಾಜ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರಡಿ ವಲಿಸಾಬ್, ಪಟ್ಟಣದ 22ನೇ ವಾರ್ಡ್‌ನ ಸ್ಲಂ ಪ್ರದೇಶದಲ್ಲಿರುವ ಸಾರ್ವಜನಿಕ ಶೌಚಾಗೃಹಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಇದರಿಂದ ವಿಶೇಷವಾಗಿ ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ವಾರ್ಡ್‌ನಲ್ಲಿ ಸಮರ್ಪಕ ಬೀದಿ ದೀಪಗಳಿಲ್ಲದ ಕಾರಣ ರಾತ್ರಿ ವೇಳೆ ಕತ್ತಲೆ ಆವರಿಸುತ್ತಿದ್ದು, ನಿವಾಸಿಗಳು ವಿಷಜಂತುಗಳ ಭೀತಿಯಲ್ಲಿ ಜೀವನ ನಡೆಸುವಂತಾಗಿದೆ. ಅಲ್ಲದೆ, ಹಳೆ ಬಸ್ ನಿಲ್ದಾಣದ ಬಳಿ ಹೊಸಪೇಟೆ ಹಾಗೂ ಕುರುಗೋಡು ಮಾರ್ಗದ ಬಸ್‌ಗಳಿಗೆ ತಾತ್ಕಾಲಿಕ ತಂಗುದಾಣ ನಿರ್ಮಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು.

ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಬೀದಿ ದೀಪಗಳು ಕಾರ್ಯನಿರ್ವಹಿಸದಿರುವುದು, ರಸ್ತೆ ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಅವರು, ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷ ಮೆಟ್ರಿ ಸೋಮಪ್ಪ, ಯುವ ಘಟಕದ ಅಧ್ಯಕ್ಷ ಕೆ. ಜಾಫರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News