Ballari | ಶಾಸಕಿ ಅನ್ನಪೂರ್ಣ ತುಕಾರಾಂ, ಸಂಸದ ಈ.ತುಕಾರಾಂರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಸಂಡೂರು/ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಆರಾಧ್ಯ ದೈವ ಶ್ರೀ ಕುಮಾರಸ್ವಾಮಿ ದೇವರ ಆಶೀರ್ವಾದದೊಂದಿಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಶಾಸಕಿ ಶ್ರೀಮತಿ ಈ. ಅನ್ನಪೂರ್ಣ ತುಕಾರಾಂ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ. ತುಕಾರಾಂ ಅವರು ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಪರಿಶೀಲನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಅವರು ಸಂಡೂರು ಕ್ಷೇತ್ರದ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರ ಸುಖ-ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ಭುಜಂಗನಗರ ಗ್ರಾಮದಲ್ಲಿ ಸಿಎಂಐಡಿಪಿ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಕಾಮಗಾರಿಯನ್ನು ಪರಿಶೀಲಿಸಲಾಯಿತು. ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದರು.
ಇದೇ ವೇಳೆ ಎನ್‌ಎಂಡಿಸಿ ಸಂಸ್ಥೆಯ ಸಿಎಸ್‌ಆರ್ ಅನುದಾನದಡಿ ನವೀಕರಣಗೊಂಡ ಸಮುದಾಯ ಭವನವನ್ನು ಉದ್ಘಾಟಿಸಲಾಯಿತು. ಈ ಭವನವು ಗ್ರಾಮಸ್ಥರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ನಂತರ ಭುಜಂಗನಗರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಕೆಆರ್‌ಡಿಬಿ ಅನುದಾನದಡಿ ನಿರ್ಮಿಸಲಾದ ಎರಡು ಶಾಲಾ ಕೊಠಡಿಗಳನ್ನು ಉದ್ಘಾಟಿಸಿ, ಮತ್ತೊಂದು ಕೊಠಡಿಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಶಿಕ್ಷಣ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ 33 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಯಿತು. ತುಂಗಭದ್ರಾ ನದಿಯಿಂದ ನೀರನ್ನು ನಾರಿಹಳ್ಳಕ್ಕೆ ತಂದು ಶುದ್ಧೀಕರಿಸಿ ಗ್ರಾಮಗಳಿಗೆ ಪೂರೈಸುವ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.
ಅದೇ ರೀತಿ ಸಂಡೂರು ಪಟ್ಟಣದ ಶ್ರೀ ಶೈಲೇಶ್ವರ ವಿದ್ಯಾಮಂದಿರದಲ್ಲಿ ಸಿಎಸ್‌ಆರ್ ಅನುದಾನದಡಿ ನಿರ್ಮಿಸಲಾದ ಡಿಜಿಟಲ್ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯನ್ನೂ ನೆರವೇರಿಸಲಾಯಿತು.
ಒಟ್ಟಾರೆಯಾಗಿ ಶಿಕ್ಷಣ, ಕುಡಿಯುವ ನೀರು, ಧಾರ್ಮಿಕ ಹಾಗೂ ಸಾಮಾಜಿಕ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಸಂಡೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.