×
Ad

Ballari | ವಸತಿ ಶಾಲೆ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಮಾಸಿಕ ಆರೋಗ್ಯ ತಪಾಸಣೆ ಕಡ್ಡಾಯ : ಡಾ.ಯಲ್ಲಾ ರಮೇಶ್ ಬಾಬು

Update: 2026-06-16 16:57 IST

ಬಳ್ಳಾರಿ, ಜೂ.16: ಹದಿಹರೆಯದ ಹೆಣ್ಣುಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆ, ರಕ್ತಹೀನತೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ವಸತಿಯುಕ್ತ ಶಾಲೆ, ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಸೂಚಿಸಿದ್ದಾರೆ.

ಸಂಬಂಧಪಟ್ಟ ವೈದ್ಯಾಧಿಕಾರಿಗಳು, ಆರ್‌ಬಿಎಸ್‌ಕೆ ವೈದ್ಯರು ಹಾಗೂ ನಮ್ಮ ಕ್ಲಿನಿಕ್ ವೈದ್ಯರು ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.

10ರಿಂದ 19 ವರ್ಷದ ಹದಿಹರೆಯದ ಅವಧಿಯಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೇಗವಾಗಿ ನಡೆಯುವುದರಿಂದ ಹಾರ್ಮೋನುಗಳ ಬದಲಾವಣೆ, ಲೈಂಗಿಕ ಆರೋಗ್ಯ, ಪೌಷ್ಟಿಕಾಂಶದ ಅಗತ್ಯತೆಗಳು ಹಾಗೂ ಭಾವನಾತ್ಮಕ ಸಮಸ್ಯೆಗಳ ಕುರಿತು ವಿಶೇಷ ನಿಗಾ ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ತಪಾಸಣೆ ವೇಳೆ ವಿದ್ಯಾರ್ಥಿನಿಯರ ತೂಕ, ಎತ್ತರ, ಪೌಷ್ಟಿಕಾಂಶ ಕೊರತೆ, ರಕ್ತಹೀನತೆ, ಕಣ್ಣಿನ ದೃಷ್ಟಿ, ಕಿವಿ ಕೇಳುವ ಸಾಮರ್ಥ್ಯ, ಮುಟ್ಟಿನ ಸಮಸ್ಯೆಗಳು, ಮೊಡವೆ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳ ಪರಿಶೀಲನೆ ನಡೆಸಬೇಕು. ಜೊತೆಗೆ ಖಿನ್ನತೆ, ಆತಂಕ, ನಿದ್ರಾಹೀನತೆ ಹಾಗೂ ಮೊಬೈಲ್ ಮತ್ತು ತಂತ್ರಜ್ಞಾನ ವ್ಯಸನದ ಲಕ್ಷಣಗಳ ಮೇಲೂ ಗಮನಹರಿಸಬೇಕು ಎಂದು ಸೂಚಿಸಿದ್ದಾರೆ.

ಅಲ್ಲದೆ, ಟಿ.ಡಿ. ಹಾಗೂ ಹೆಚ್‌ಪಿವಿ (HPV) ಲಸಿಕೆಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 63 ವಸತಿಯುಕ್ತ ಶಾಲೆ ಮತ್ತು ಕಾಲೇಜುಗಳಿದ್ದು, 8,933 ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಹನುಮಂತಪ್ಪ ತಿಳಿಸಿದ್ದಾರೆ.

ಬಳ್ಳಾರಿ-26, ಸಿರುಗುಪ್ಪ-14, ಸಂಡೂರು-14, ಕಂಪ್ಲಿ-05 ಹಾಗೂ ಕುರುಗೋಡು-04 ಸೇರಿದಂತೆ ಒಟ್ಟು 63 ಸಂಸ್ಥೆಗಳ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ನಡೆಸಿ ಪ್ರತಿ ತಿಂಗಳು ವರದಿ ಸಲ್ಲಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ತಪಾಸಣೆ ವೇಳೆ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ವಿದ್ಯಾರ್ಥಿನಿಯರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮದಡಿ ಜಾಗೃತಿ :

ವೈದ್ಯಕೀಯ ತಪಾಸಣೆಯ ಜೊತೆಗೆ ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮದಡಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಶಿಕ್ಷಣ ನೀಡಲು ಯೋಜಿಸಲಾಗಿದೆ. ಹದಿಹರೆಯದ ಗರ್ಭಧಾರಣೆಯ ದುಷ್ಪರಿಣಾಮಗಳು, ಋತುಚಕ್ರದ ನೈರ್ಮಲ್ಯ, ಪೋಕ್ಸೊ ಕಾಯ್ದೆ, ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಅಪೌಷ್ಟಿಕತೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News