ಬಳ್ಳಾರಿ: ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ-ಸಡಗರದಿಂದ ಆಚರಿಸಲು ನಗರ ಹಾಗೂ ಗ್ರಾಮೀಣ ಭಾಗದ ಜನರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಹಬ್ಬಕ್ಕೆ ಅಗತ್ಯವಿರುವ ಪೂಜಾ ಸಾಮಗ್ರಿಗಳು, ಹೂವು, ಹಣ್ಣು, ಪಟಾಕಿ ಹಾಗೂ ಮಣ್ಣಿನ ಹಣತೆಗಳ ಖರೀದಿಗೆ ಮಾರುಕಟ್ಟೆಗಳಲ್ಲಿ ಗ್ರಾಹಕರು ಮುಗಿಬಿದ್ದಿದ್ದಾರೆ.

ನಗರದ ಅನಂತಪುರ ರಸ್ತೆ, ಸಿರುಗುಪ್ಪ ರಸ್ತೆ, ಸಂಗಂ ವೃತ್ತ, ಮೋತಿ ವೃತ್ತ, ಕನಕದುರ್ಗಮ್ಮ ವೃತ್ತ, ರಾಯಲ್ ವೃತ್ತ, ಸಣ್ಣ ಮಾರ್ಕೆಟ್, ಬೆಂಗಳೂರು ರಸ್ತೆ, ತೇರು ಬಜಾರ್ ಹಾಗೂ ಹೂವಿನ ಮಾರುಕಟ್ಟೆಗಳಲ್ಲಿ ಮಂಗಳವಾರ ವ್ಯಾಪಾರ ವಹಿವಾಟು ಜೋರಾಗಿತ್ತು.

ಪೂಜೆಗೆ ಅಗತ್ಯವಾದ ಚೆಂಡುಹೂವು, ಸೇವಂತಿಗೆ, ಬಾಳೆದಿಂಡು, ಕುಂಬಳಕಾಯಿ ಹಾಗೂ ಕಬ್ಬು ಖರೀದಿಸಲು ಜನರು ಉತ್ಸಾಹ ತೋರಿದರು. ಇದರೊಂದಿಗೆ ವಿವಿಧ ವಿನ್ಯಾಸದ ಸಾಂಪ್ರದಾಯಿಕ ಗೊಂಬೆಗಳು, ವಿದ್ಯುತ್ ದೀಪಗಳ ಅಲಂಕಾರಿಕ ಸರಣಿಗಳು, ಹೊಸ ಬಟ್ಟೆಗಳು ಹಾಗೂ ದ್ವಿಚಕ್ರ ವಾಹನಗಳ ಖರೀದಿಯೂ ಭರದಿಂದ ಸಾಗಿತು.

ಮಣ್ಣಿನ ಹಣತೆಗಳಿಗೆ ಭಾರಿ ಬೇಡಿಕೆ :

ದೀಪಾವಳಿಯ ಪ್ರಮುಖ ಆಕರ್ಷಣೆಯಾದ ಮಣ್ಣಿನ ಹಣತೆಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಸುಂದರ ಬಣ್ಣಗಳಿಂದ ಅಲಂಕರಿಸಲಾದ ಹಾಗೂ ಯಾವುದೇ ಕೃತಕ ಬಣ್ಣವಿಲ್ಲದ ನೈಸರ್ಗಿಕ ಮಣ್ಣಿನ ಹಣತೆಗಳನ್ನು ಖರೀದಿಸಲು ಜನರು ಆಸಕ್ತಿ ತೋರಿದರು. ಮಾರುಕಟ್ಟೆಯಲ್ಲಿ ಸಣ್ಣ ಗಾತ್ರದ ಹಣತೆಗಳು ಪ್ರತಿ ಡಜನ್‌ಗೆ 50 ರೂ. ನಿಂದ 100 ರೂ. ವರೆಗೆ ಮಾರಾಟವಾಗುತ್ತಿದ್ದರೆ, ದೊಡ್ಡ ಗಾತ್ರದ ಅಲಂಕಾರಿಕ ಹಣತೆಗಳ ಬೆಲೆ 100 ರೂ. ನಿಂದ 200 ರೂ. ವರೆಗೆ ಇತ್ತು.

ಐಟಿಐ ಮೈದಾನದಲ್ಲಿ ಪಟಾಕಿ ಖರೀದಿ ಭರಾಟೆ: ನಗರದ ರೇಡಿಯೊ ಪಾರ್ಕ್ ಬಳಿಯ ಐಟಿಐ ಕಾಲೇಜು ಮೈದಾನದಲ್ಲಿ ದೀಪಾವಳಿ ಅಂಗವಾಗಿ 15ಕ್ಕೂ ಹೆಚ್ಚು ಅಧಿಕೃತ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಲಕ್ಷ್ಮಿ ಪಟಾಕಿ, ಸುರ್‌ಸುರ್ ಬತ್ತಿ, ರಾಕೆಟ್ ಸೇರಿದಂತೆ ವಿವಿಧ ಬಗೆಯ ಹಸಿರು ಪಟಾಕಿಗಳ ಖರೀದಿಗೆ ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಒಂದು ಕೆ.ಜಿ. ಪಟಾಕಿ ಪ್ಯಾಕೆಟ್‌ಗೆ 600 ರೂ. ವರೆಗೆ ಬೆಲೆಯಿದೆ. ಪೋಷಕರೊಂದಿಗೆ ಬಂದಿದ್ದ ಮಕ್ಕಳು ತಮಗಿಷ್ಟವಾದ ಪಟಾಕಿಗಳನ್ನು ಉತ್ಸಾಹದಿಂದ ಖರೀದಿಸುತ್ತಿದ್ದ ದೃಶ್ಯಗಳು ಮಾರುಕಟ್ಟೆಯಲ್ಲಿ ಕಂಡುಬಂದವು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor