ಬಳ್ಳಾರಿಯಲ್ಲಿ 4 ಎಕರೆ ಸರ್ಕಾರಿ ಜಮೀನು ಒತ್ತುವರಿ ತೆರವು
ಬಳ್ಳಾರಿ: ನಗರದ ಸರ್ವೆ ನಂಬರ್ 607ರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಲಾಗಿದ್ದ ಒಟ್ಟು 4 ಎಕರೆ ಸರ್ಕಾರಿ ಜಮೀನನ್ನು ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಎನ್.ಝುಬೇರ್ ನೇತೃತ್ವದ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಜಂಟಿ ತಂಡ ಸೋಮವಾರ ಕಾರ್ಯಾಚರಣೆ ನಡೆಸಿ ಮರುಸ್ವಾಧೀನಪಡಿಸಿಕೊಂಡಿದೆ.
ತೆರವು ಕಾರ್ಯಾಚರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಎನ್.ಝುಬೇರ್, ರಸ್ತೆ ಅಗಲೀಕರಣ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳು ಹಿಂದೆ ಬಿಟ್ಟುಕೊಟ್ಟಿದ್ದ 1 ಎಕರೆ 23 ಸೆಂಟ್ಸ್ ಜಮೀನು ಒತ್ತುವರಿಯಾಗಿತ್ತು. ಮತ್ತೊಂದೆಡೆ, ಸುಮಾರು 14 ವರ್ಷಗಳ ಹಿಂದೆ ಹಿಂದುಳಿದ ವರ್ಗದ ಬೌದ್ಧಿಕ ವಿಕಲಚೇತನ ಮಕ್ಕಳ ಕಲ್ಯಾಣಕ್ಕಾಗಿ ‘ಆರೋಗ್ಯ ನಿಕೇತನ ಟ್ರಸ್ಟ್’ಗೆ ಮಂಜೂರು ಮಾಡಲಾಗಿದ್ದ 2 ಎಕರೆ 27 ಸೆಂಟ್ಸ್ ಜಮೀನನ್ನು ನಿಗದಿತ ಉದ್ದೇಶಕ್ಕೆ ಬಳಸಿಕೊಂಡಿರಲಿಲ್ಲ ಎಂದು ವಿವರಿಸಿದರು.
ಆಡಿಟ್ ವರದಿಯಲ್ಲಿ ಕಂಡುಬಂದ ಲೋಪದೋಷಗಳು ಹಾಗೂ ನಿಯಮಾನುಸಾರ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರ ಆದೇಶದಂತೆ ಟ್ರಸ್ಟ್‌ಗೆ ನೀಡಲಾಗಿದ್ದ 2 ಎಕರೆ 27 ಸೆಂಟ್ಸ್ ಜಮೀನನ್ನು ಸರ್ಕಾರಕ್ಕೆ ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ರಸ್ತೆಗಾಗಿ ಮೀಸಲಿಟ್ಟಿದ್ದ ಜಮೀನು ಸೇರಿದಂತೆ ಒಟ್ಟು 4 ಎಕರೆ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ‘ಟಾಸ್ಕ್ ಫೋರ್ಸ್’ ವತಿಯಿಂದ ನಡೆದ 17ನೇ ಯಶಸ್ವಿ ಒತ್ತುವರಿ ತೆರವು ಕಾರ್ಯಾಚರಣೆ ಇದಾಗಿದೆ ಎಂದು ಹೇಳಿದರು.
ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತ ಎಚ್.ಡಿ. ರಾಜೇಶ್, ತಹಸೀಲ್ದಾರ್ ಸೇರಿದಂತೆ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.