ಶಾಸಕ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ಸೇರಿದ 'ಮಾಡೆಲ್ ಮನೆ'ಗೆ ಬೆಂಕಿ !
ಬಳ್ಳಾರಿ, ಜ.23: ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರ ಮಾಲಕತ್ವದ ಬಳ್ಳಾರಿಯ ಕುವೆಂಪು ನಗರದಲ್ಲಿರುವ ‘ಶ್ರೀಮತಿ ರುಕ್ಮಿಣಿಮ್ಮ ಚಂಗಾರೆಡ್ಡಿ’ ಬಡಾವಣೆಯಲ್ಲಿ ಶುಕ್ರವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಜಿ-ಸ್ಕ್ವೇರ್ ಮಾದರಿ ಸುಸಜ್ಜಿತ ಮನೆಯೊಂದು ಬೆಂಕಿಗಾಹುತಿಯಾಗಿದೆ.
ಹೈದರಾಬಾದ್ ಮೂಲದ ಜಿ-ಸ್ಕ್ವೇರ್ ಕಂಪನಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ಲೇಔಟ್‌ನಲ್ಲಿ, ನಿವೇಶನಗಳ ಮಾರಾಟದ ಪ್ರಚಾರಕ್ಕಾಗಿ ಜನಾರ್ದನ ರೆಡ್ಡಿ ಅವರು ಅತ್ಯಂತ ಆಕರ್ಷಕ ‘ಮಾದರಿ ಮನೆ’ಯನ್ನು ನಿರ್ಮಿಸಿದ್ದರು. ಶುಕ್ರವಾರ ಸಂಜೆ ಇದ್ದಕ್ಕಿದ್ದಂತೆ ಈ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಜ್ವಾಲೆ ವ್ಯಾಪಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಜಿ-ಸ್ಕ್ವೇರ್ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಜನಾರ್ದನ ರೆಡ್ಡಿ ಹಾಗೂ ಬಿ. ಶ್ರೀರಾಮುಲು ಅವರ ನೂರಾರು ಬೆಂಬಲಿಗರು ಸ್ಥಳಕ್ಕೆ ಜಮಾಯಿಸಿದ್ದರು.
ಘಟನೆ ಬಗ್ಗೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಬ್ಯಾನರ್ ಗಲಾಟೆ ವೇಳೆ ಬೆಂಕಿ ಹಚ್ಚುತ್ತೇನೆಂದು ಹೇಳಿದ್ದರು. ಅಂದಿನ ಘಟನೆಗೆ ಸಾಕ್ಷಿ ಎನ್ನುವಂತೆ ಈಗ ಬೆಂಕಿ ಹಚ್ಚಿದ್ದಾರೆ. ಜನವರಿ 23 ರ ಸಂಜೆ 6:30 ರ ಸುಮಾರಿಗೆ ಬೆಂಕಿ ಹಚ್ಚಲಾಗಿದೆ. ಬೆಂಕಿ ಹಚ್ಚಿದವರನ್ನ ಹಿಡಿಯಲು ಕೆಲವರು ಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಎಸ್ಪಿ ಡಾ. ಸುಮನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.