×
Ad

ಬಳ್ಳಾರಿಯ ನಗರದಲ್ಲಿ ಕಾಣಿಸಿಕೊಂಡಿದ್ದ ಕರಡಿಯ ರಕ್ಷಣೆ

Update: 2025-07-30 19:52 IST

ಸಾಂದರ್ಭಿಕ ಚಿತ್ರ

ಬಳ್ಳಾರಿ :ನಗರದ ಟಿ.ಬಿ.ಸ್ಯಾನಿಟೋರಿಯಂ ಬಳಿ ಕಳೆದ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಕರಡಿಯನ್ನು ಬುಧವಾರ ಮುಂಜಾನೆ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ನಿರಂತರ ಕಾರ್ಯಾಚರಣೆಯಿಂದ ಯಶಸ್ವಿಯಾಗಿ ಸೆರೆ ಹಿಡಿದು ರಕ್ಷಿಸಲಾಗಿದೆ ಎಂದು ಬಳ್ಳಾರಿ ಪ್ರಾದೇಶಿಕ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್ ಅವರು ತಿಳಿಸಿದ್ದಾರೆ.

ಜು.28 ಸೋಮವಾರ ರಾತ್ರಿ 11 ಗಂಟೆಗೆ ಟಿ.ಬಿ.ಸ್ಯಾನಿಟೋರಿಯಂ ಬಳಿ ಕರಡಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಕರಡಿಯ ಚಲನ ವಲನಗಳ ಮೇಲೆ ನಿಗಾವಹಿಸಿ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಹಲವು ತಂಡಗಳನ್ನು ರಚಿಸಿ ಸೆರೆಹಿಡಿಯಲು ಯೋಜನೆ ರೂಪಿಸಲಾಗಿತ್ತು.

ಕರಡಿಯು ಬಳ್ಳಾರಿ ಕೋಟೆಯ ಮೇಲೆ ತೆರಳಿ ಬಂಡೆ ಪ್ರದೇಶದಲ್ಲಿ ಅಡಗಿಕೊಂಡಿತ್ತು. ಜನರನ್ನು ಗಾಬರಿಗೊಳಿಸದೇ ಪರ್ಯಾಯ ತಂಡಗಳನ್ನು ಕೋಟೆಯ ಸುತ್ತಮುತ್ತ ನಿಯೋಜಿಸಿ ಕೋಟೆಯ ಮೇಲೆ ಜನ ಸಂಚಾರವನ್ನು ನಿರ್ಭಂಧಿಸಲಾಗಿತ್ತು. ಕರಡಿ ನಿಧಾನವಾಗಿ ಕೋಟೆಯಿಂದ ಕೆಳಕ್ಕೆ ಇಳಿಯಲು ಪ್ರಾರಂಭಿಸಿದಾಗ ಕಮಲಾಪುರದ ಶ್ರೀಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಮೃಗಾಲಯದ ಪಶು ವೈದ್ಯಕೀಯ ತಂಡದ ಸಹಾಯ ಪಡೆದು ಜು.30 ಬುಧವಾರ ಬೆಳಿಗ್ಗೆ 3 ಗಂಟೆ ಸಮಯದಲ್ಲಿ ಯಶಸ್ವಿಯಾಗಿ ಸೆರೆ ಹಿಡಿಯಲಾಯಿತು.

ಸೆರೆ ಹಿಡಿದಿರುವ ಕರಡಿಯು ಅಂದಾಜು ಐದು ವರ್ಷದ ಹೆಣ್ಣು ಕರಡಿಯಾಗಿದ್ದು, ಪಶು ವೈದ್ಯರ ತಂಡವು ಪ್ರಾಥಮಿಕವಾಗಿ ಪರೀಕ್ಷಿಸಿ ಕರಡಿಯ ಗುರುತಿಗಾಗಿ ಮೈಕ್ರೋ ಚಿಪ್ ಅಳವಡಿಸುವಿಕೆ, ಹೆಚ್ಚಿನ ಚಿಕಿತ್ಸೆ ಮತ್ತು ಪರೀಕ್ಷೆಗಾಗಿ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಕಳುಹಿಸಲಾಗಿದೆ.

ವಲಯ ಅರಣ್ಯಾಧಿಕಾರಿ ಗಿರೀಶ್ ಕುಮಾರ್ ಡಿ.ಕೆ ಮತ್ತು ಅವರ ಸಿಬ್ಬಂದಿಗಳ ತಂಡದ ನಿರಂತರ ಪ್ರಯತ್ನಗಳಿಂದ ಪೊಲೀಸ್ ಹಾಗೂ ಪುರಾತತ್ವ ಇಲಾಖೆಯ ಸಹಕಾರದೊಂದಿಗೆ ಸಾರ್ವಜನಿಕರಿಗೆ ಯಾವುದೇ ಅಪಾಯವಾಗದಂತೆ ಎರಡು ದಿನಗಳ ಕಾಲ ನಿರಂತರ ಕಾರ್ಯಾಚರಣೆಯ ನಂತರ ಕರಡಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News