ಸಿರುಗುಪ್ಪ: ಬ್ರಿಟಿಷರ ದಬ್ಬಾಳಿಕೆ ಹಾಗೂ ಅನ್ಯಾಯದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ನಾಡಿನ ಸ್ವಾಭಿಮಾನವನ್ನು ಎತ್ತಿಹಿಡಿದ ವೀರರಾಣಿ ಕಿತ್ತೂರು ಚೆನ್ನಮ್ಮನವರ ಧೈರ್ಯ, ಸಾಹಸ ಮತ್ತು ತ್ಯಾಗ ಇಂದಿನ ಪೀಳಿಗೆಗೆ ಸದಾ ದಾರಿದೀಪವಾಗಿವೆ ಎಂದು ಸಿರುಗುಪ್ಪ ತಹಸೀಲ್ದಾರ್ ಗೌಸಿಯ ಬೇಗಂ ಹೇಳಿದರು.

ನಗರದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರಿಗೆ ವಿಶಿಷ್ಟ ಸ್ಥಾನವಿದೆ. ಅಧಿಕಾರದ ಆಸೆಗಾಗಿ ಅಲ್ಲದೆ, ನಾಡಿನ ಹಕ್ಕು ಮತ್ತು ಗೌರವದ ರಕ್ಷಣೆಗಾಗಿ ಅವರು ಬ್ರಿಟಿಷರ ವಿರುದ್ಧ ಹೋರಾಡಿದರು. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಹೋರಾಡಿದ ಅವರ ಜೀವನಗಾಥೆ ಮಹಿಳೆಯರ ಆತ್ಮವಿಶ್ವಾಸ, ಧೈರ್ಯ ಮತ್ತು ಸ್ವಾವಲಂಬನೆಗೆ ಪ್ರೇರಣೆಯಾಗಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದು, ವೀರರಾಣಿ ಕಿತ್ತೂರು ಚೆನ್ನಮ್ಮನವರ ಹೋರಾಟ ಹಾಗೂ ತ್ಯಾಗವನ್ನು ಸ್ಮರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor