ಶಾಲಾ ಮಕ್ಕಳ ಶೂ ವಿತರಣೆಗೆ 6 ಕೋಟಿ ರೂ. ಬಿಡುಗಡೆ
ಬೆಂಗಳೂರು : ಸರಕಾರಿ ಶಾಲೆಯ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ವಿದ್ಯಾ ವಿಕಾಸ ಯೋಜನೆಯಡಿ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಶಾಲೆಯ ವಿದ್ಯಾರ್ಥಿಗಳ ದಾಖಲಾತಿಯನ್ನು ಖಚಿತಪಡಿಸಿಕೊಂಡು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಗತ್ಯ ಅನುದಾನ ವಿತರಣೆ ಮಾಡಬೇಕು. ಪ್ರತಿ ವಿದ್ಯಾರ್ಥಿಗೂ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ನೀಡಬೇಕು. ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಮೂವರು ಸದಸ್ಯರು, ಮುಖ್ಯ ಶಿಕ್ಷಕರ ಸಮಿತಿ ಮೂರು ತಿಂಗಳ ಒಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
1ರಿಂದ 5ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 265 ರೂ. 6ರಿಂದ 8ನೇ ವಿದ್ಯಾರ್ಥಿಗಳಿಗೆ 295 ರೂ. ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ನಿಗದಿ ಮಾಡಲಾಗಿದೆ. ಶೂ ಮತ್ತು ಸಾಕ್ಸ್ ಗಳ ಗುಣಮಟ್ಟ ಪರಿಶೀಲಿಸಲು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಮಿತಿ ರಚಿಸಬೇಕು.
ಹಿಂದೆ ಕಳಪೆ ಗುಣಮಟ್ಟದ ಶೂ ವಿತರಿಸಿರುವ ದೂರುಗಳಿದ್ದರೆ ಮುಖ್ಯಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಲಾಗಿದೆ.