Bengaluru | ಬೆಂಕಿ ಅವಘಡ: ಹೊತ್ತಿ ಉರಿದ 15 ಶೆಡ್‍ಗಳು
ಬೆಂಗಳೂರು : ಕಸಕ್ಕೆ ಬೆಂಕಿ ಹೊತ್ತಿಕೊಂಡು ಪಕ್ಕದಲ್ಲೇ ಸಂಗ್ರಹವಾಗಿದ್ದ ಗುಜರಿ ವಸ್ತುಗಳಿಗೂ ತಾಗಿದ ಕಿಡಿ 15 ಶೆಡ್‍ಗಳಿಗೂ ಹರಡಿ ಹೊತ್ತಿ ಉರಿದ ಘಟನೆ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಎಳೇನಹಳ್ಳಿಯಲ್ಲಿರುವ ಕಸದ ಡಂಪಿಂಗ್ ಯಾರ್ಡ್‍ನಲ್ಲಿ ಗುರುವಾರ ನಡೆದಿದೆ.
ಗುರುವಾರ ಬೆಳಗಿನ ಜಾವ 3.15ರ ಸುಮಾರಿನಲ್ಲಿ ಕಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕಿಡಿ ಪಕ್ಕದಲ್ಲೇ ಸಂಗ್ರಹಿಸಿಡಲಾಗಿದ ಗುಜರಿ ವಸ್ತುಗಳಿಗೂ ತಾಗಿ ಬೆಂಕಿಯ ತೀವ್ರತೆ ಹೆಚ್ಚಾಗಿ ಪಕ್ಕದ 15 ಶೆಡ್‍ಗಳು ಹರಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸುದ್ದಿ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ನಾಲ್ಕು ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ಹರಸಾಹಸದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿಯಿಂದಾಗಿ 15 ಶೆಡ್‍ಗಳು ಸುಟ್ಟು ಹೋಗಿವೆ. ಅದೃಷ್ಟವಶಾತ್ ಶೆಡ್‍ಗಳಲ್ಲಿ ವಾಸವಾಗಿದ್ದ ಪಶ್ಚಿಮ ಬಂಗಾಳ ಮೂಲದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಈ ಶೆಡ್‍ನಲ್ಲಿ ವಾಸವಾಗಿರುವವರು ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೇಗೂರು ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೂರು ತಿಂಗಳ ಹಿಂದೆ ಇದೇ ಜಾಗದಲ್ಲಿ ಬೆಂಕಿ ಅವಘಡ ಸಂಭವಿಸಿ 50 ಗುಡಿಸಲುಗಳು ಭಸ್ಮಗೊಂಡಿದ್ದವು. ಹಾಗಾಗಿ ಗುಡಿಸಲಿನಲ್ಲಿದ್ದ ನಿವಾಸಿಗಳು ಬೇರೆಡೆ ನೆಲೆಸಿದ್ದಾರೆ.
ಸದ್ಯ, ಮತ್ತೆ ಈ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಸಂಬಂಧ ಬೇಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.