ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಸಂಬಂಧ ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಕಚೇರಿಯಗಳ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ(ಈಡಿ) ಅಧಿಕಾರಿಗಳು 7.52 ಲಕ್ಷ ರೂ. ಹಣ, ವಿದೇಶಿ ಕರೆನ್ಸಿ, ಭಾರಿ ಪ್ರಮಾಣದ ಚಿನ್ನದ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈಡಿ ಅಧಿಕಾರಿಗಳು ಸೆ.23 ಮತ್ತು 24ರಂದು ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ವಿಶಾಖಪಟ್ಟಣಂನಲ್ಲಿರುವ ಕಂಪೆನಿಯ ಮುಖ್ಯ ಕಚೇರಿ, ಶಾಖೆಗಳು ಮತ್ತು ನಿರ್ದೇಶಕರ ನಿವಾಸಗಳು ಸೇರಿದಂತೆ ಒಟ್ಟು 16 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೋಧನೆ ನಡೆಸಿದ್ದಾರೆ. ಕಳ್ಳತನವಾದ ಚಿನ್ನದ ಆಭರಣಗಳನ್ನು ಕಾನೂನುಬಾಹಿರವಾಗಿ ಖರೀದಿಸುವ ಮಾಡುತ್ತಿದ್ದ ಕುರಿತಾಗಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಎಫ್‍ಐಆರ್, ದೋಷರೋಪ ಪಟ್ಟಿ ಆಧಾರದ ಮೇಲೆ ಈ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.

ಅಪರಾಧ ಚಟುವಟಿಕೆಗಳಿಂದ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪ ಹೊತ್ತಿರುವ ಕಂಪನಿಯ ಮುಖ್ಯಸ್ಥ ಪಿ.ಎಸ್.ಆಯೂಬ್ ಅಲಿಯಾಸ್ ಬೊಮ್ಮನಹಳ್ಳಿ ಬಾಬು, ಉಬೇದುಲ್ಲಾ ಎ., ಮುಹಮ್ಮದ್ ಸಲ್ಮಾನ್ ಎ., ಅರ್ಬಿನ್ ತಾಜ್ ಎ. ಸೇರಿದಂತೆ ಪ್ರಮುಖರು ಮತ್ತು ಸಿಬ್ಬಂದಿಗಳು ವಿಚಾರಣೆಗೆ ಸಹಕರಿಸದೆ ತಲೆಮರೆಸಿಕೊಂಡಿದ್ದಾರೆ ಎಂದು ಈಡಿ ಅಧಿಕಾರಿಗಳು ಹೇಳಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು 7.52 ಲಕ್ಷ ನಗದು ರೂ. ಹಣ, ವಿದೇಶಿ ಕರೆನ್ಸಿ, ಭರಿ ಪ್ರಮಾಣದ ಚಿನ್ನದ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮುಂದುವರೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor