Bengaluru | ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಎಸ್‍ಐಟಿಗೆ ದಕ್ಷ ಅಧಿಕಾರಿಗಳನ್ನು ನೇಮಿಸಲು ಒತ್ತಾಯಿಸಿ ಧರಣಿ
ಬೆಂಗಳೂರು: ಧರ್ಮಸ್ಥಳದ ಸೌಜನ್ಯಾ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ತನಿಖೆ ಮಾಡಲು ರಾಜ್ಯ ಸರಕಾರವು ಸುಪ್ರೀಂ ಕೋರ್ಟ್ ಆದೇಶದ ಆಶಯವನ್ನು ಬದಿಗೊತ್ತಿ ರಚಿಸಿದ ವಿಶೇಷ ತನಿಖಾ ತಂಡವನ್ನು(ಎಸ್‍ಐಟಿ) ಕೂಡಲೇ ರದ್ದುಪಡಿಸಬೇಕು. ಕೋರ್ಟ್ ಆದೇಶದಂತೆಯೇ ದಕ್ಷ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡವನ್ನು ರಚನೆ ಮಾಡಬೇಕು ಎಂದು ಒತ್ತಾಯಿಸಿ ‘ಧರ್ಮಸ್ಥಳದಲ್ಲಿ ಮಹಿಳೆಯನ್ನು ಕೊಂದವರು ಯಾರು?’ ಸಂಘಟನೆಯ ಮುಖಂಡರು ಶುಕ್ರವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಿದರು.
ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ಹಳೆಯ ತನಿಖಾ ಸಂಸ್ಥೆಗಳು ತೋರಿದ ಕಳಪೆ ಕಾಳಜಿ ಹಾಗೂ ತನಿಖಾ ವೈಫಲ್ಯವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿ, ಅತ್ಯುನ್ನತ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆಗೆ ಸೂಚನೆಗಳನ್ನು ನೀಡಿರುವುದು ಸ್ವಾಗತರ್ಹ. ಆದರೆ, ಸೌಜನ್ಯ ಪ್ರಕರಣದ ಮರುತನಿಖೆಗೆ ಈಗ ರಚನೆಯಾಗಿರುವ ಎಸ್‍ಐಟಿ ನ್ಯಾಯಾಲಯದ ಆದೇಶದ ಆಶಯಕ್ಕೆ ಪೂರಕವಾಗಿಲ್ಲ ಎಂದು ಧರಣಿನಿರತರು ಬೇಸರ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಉನ್ನತ ಮಟ್ಟದ ಅಧಿಕಾರಿಯ ನೇತೃತ್ವದಲ್ಲೇ ತನಿಖೆ ನಡೆಯಬೇಕು ಎಂದು ಸ್ಪಷ್ಟವಾಗಿ ನಿರ್ದೇಶಿಸಿದ್ದರೂ, ರಾಜ್ಯ ಸರಕಾರ ಐಜಿಪಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ತಂಡ ರಚಿಸಿದೆ. ಈ ಪ್ರಕರಣದ ಗಂಭೀರತೆ, ಹಿಂದಿನ ತನಿಖಾ ಲೋಪಗಳು ಮತ್ತು ಪ್ರಭಾವಿಗಳ ಕೈವಾಡವನ್ನು ಗಮನಿಸಿದರೆ, ಈ ತನಿಖೆಯು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು(ಡಿಜಿ) ಅಥವಾ ಅಪರ ಮಹಾ ನಿರ್ದೇಶಕರು(ಎಡಿಜಿಪಿ)ದರ್ಜೆಯ ಅತ್ಯುನ್ನತ ಅಧಿಕಾರಿಯ ನೇತೃತ್ವದಲ್ಲೇ ನಡೆಯಬೇಕಿತ್ತು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.
ಪತ್ರಕರ್ತ ನವೀನ್ ಸೂರಿಂಜೆ ಅವರು ಮಾಧ್ಯಮಗಳ ಮೂಲಕ ಬಹಿರಂಗಪಡಿಸಿರುವಂತೆ, ಎಸ್‍ಐಟಿಗೆ ಸೇರ್ಪಡೆಗೊಳಿಸಲಾಗಿರುವ ಎಸಿಪಿ ವೆಂಕಟೇಶ್ ಪ್ರಸನ್ನ ಅವರ ಮೇಲೆ ವಕೀಲರ ಕೊಲೆ, ವಂಚನೆ ಪ್ರಕರಣ, ಭೂಗತ ಪಾತಕಿಗಳ ಜೊತೆಗಿನ ಸಂಪರ್ಕ, ಅಪರಾಧಿಗಳಿಗೆ ತನಿಖಾ ಮಾಹಿತಿ ಸೋರಿಕೆ ಹಾಗೂ ಗಂಭೀರ ಭ್ರಷ್ಟಾಚಾರದ ಆರೋಪಗಳಿವೆ. ಅಲ್ಲದೆ ಅವರ ಮೇಲೆ ಇಲಾಖಾ ತನಿಖೆಗಳು ನಡೆದಿದಿವೆ. ಇಂತಹ ಗುರುತರ ಆರೋಪ ಹೊತ್ತಿರುವ ಅಧಿಕಾರಿಯನ್ನು ಎಸ್‍ಐಟಿಗೆ ತಂದು ಕೂರಿಸಿದರೆ, ಅದು ಸುಪ್ರೀಂ ಕೋರ್ಟ್ ಆದೇಶದ ಮೂಲ ಆಶಯಕ್ಕೆ ಎಸಗಿದ ದ್ರೋಹವಾಗುತ್ತದೆ ಎಂದು ‘ಧರ್ಮಸ್ಥಳದಲ್ಲಿ ಮಹಿಳೆಯನ್ನು ಕೊಂದವರು ಯಾರು?’ ಎಂಬ ಸಂಘಟನೆಯ ಮುಖಂಡರು ಖಂಡಿಸಿದರು.
ಧರಣಿಯಲ್ಲಿ ಧರ್ಮಸ್ಥಳದಲ್ಲಿ ಮಹಿಳೆಯನ್ನು ಕೊಂದವರು ಯಾರು? ಸಂಘಟನೆಯ ಮುಖಂಡರು ಸೇರಿ ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.
‘ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಡಿಜಿಪಿ ಅಥವಾ ಎಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನೇ ಎಸ್‍ಐಟಿಯ ಮುಖ್ಯಸ್ಥರಾಗಿ ನೇಮಿಸಬೇಕು. ಸೌಜನ್ಯ ಪ್ರಕರಣದ ಮರುತನಿಖೆಗೆ ಆದೇಶಿಸಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಲ್ಲಿ ಸ್ಪಷ್ಟವಾಗಿ ಹೇಳಿದಂತೆ, ತಂಡದಲ್ಲಿ ತಾಂತ್ರಿಕ ಪರಿಣತಿ ಆಗಿರುವ ಅಧಿಕಾರಿಗಳಿರಬೇಕು. ಭ್ರಷ್ಟಾಚಾರ, ಕರ್ತವ್ಯಲೋಪ, ಮಹಿಳೆಯರ ವಿಚಾರದಲ್ಲಿ ಸೂಕ್ಷ್ಮತೆ ಇಲ್ಲದ ಮತ್ತು ಕೋಮುವಾದಿ ಶಕ್ತಿಗಳೊಂದಿಗೆ ನೇರ ಸಂಪರ್ಕದ ಆರೋಪ ಹೊಂದಿರುವ ಅಧಿಕಾರಿಗಳು ಸಮಿತಿಯಲ್ಲಿರಬಾರದು’
-ಗೌರಮ್ಮ, ಮಹಿಳಾಪರ ಹೋರಾಟಗಾರರು
‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹಮಂತ್ರಿ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶಿಸಿ, ಸ್ಥಳೀಯ ಪ್ರಭಾವಕ್ಕೆ ಅಥವಾ ಹಿಂದಿನ ಯಾವುದೇ ತನಿಖಾ ಲೋಪಗಳಿಗೆ ಒಳಗಾಗದ ಕಳಂಕವಿಲ್ಲದ, ಅತ್ಯಂತ ದಕ್ಷ ಮತ್ತು ವಿಶ್ವಾಸಾರ್ಹ ಅಧಿಕಾರಿಗಳನ್ನು ತನಿಖಾ ತಂಡಕ್ಕೆ ನೇಮಿಸಬೇಕು. ಪಾರದರ್ಶಕ ಮರುತನಿಖೆಗೆ ಅವಕಾಶ ಮಾಡಿಕೊಡಬೇಕು’
-ಜ್ಯೋತಿ, ಧರ್ಮಸ್ಥಳದಲ್ಲಿ ಮಹಿಳೆಯನ್ನು ಕೊಂದವರು ಯಾರು? ಸಂಘಟನೆಯ ಮುಖಂಡರು