ಸಾಂದರ್ಭಿಕ ಚಿತ್ರ 

ಬೆಂಗಳೂರು : ಕರ್ನಾಟಕದಲ್ಲಿ ನವೆಂಬರ್ 11ಕ್ಕೆ ಖಾಲಿಯಾಗಲಿರುವ ವಿಧಾನ ಪರಿಷತ್ (ಎಂಎಲ್‍ಸಿ)ನ ನಾಲ್ಕು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗವು ಚುನಾವಣೆ ಘೋಷಿಸಿದೆ. ಅಕ್ಟೋಬರ್ 23ರಂದು ಮತದಾನ, ಅ.27ರಂದು ಮತ ಎಣಿಕೆ ನಡೆಯಲಿದ್ದು ಅಂದೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ.

ಪರಿಷತ್ ಹಾಲಿ ಸದಸ್ಯರಾದ ಚಿದಾನಂದ ಎಂ.ಗೌಡ (ಆಗ್ನೇಯ ಪದವೀಧರರ ಕ್ಷೇತ್ರ), ಎಸ್.ವಿ. ಸಂಕನೂರ್(ಪಶ್ಚಿಮ ಪದವೀಧರರ ಕ್ಷೇತ್ರ), ಶಶೀಲ್ ಜಿ.ನಮೋಶಿ (ಈಶಾನ್ಯ ಶಿಕ್ಷಕರ ಕ್ಷೇತ್ರ) ಹಾಗೂ ಪುಟ್ಟಣ್ಣ (ಬೆಂಗಳೂರು ಶಿಕ್ಷಕರ ಕ್ಷೇತ್ರ) ಅವರ ಅವಧಿಯು ನವೆಂಬರ್ 11ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

2020ರಲ್ಲಿ ಈ ನಾಲ್ವರು ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದರಾದರೂ, 2023ರ ವಿಧಾನಸಭಾ ಚುನಾವಣೆಗೂ ಮುನ್ನ ಪುಟ್ಟಣ್ಣ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ಸೆಪ್ಟೆಂಬರ್ 29ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಅಕ್ಟೋಬರ್ 6 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಅ.7ಕ್ಕೆ ನಾಮಪತ್ರ ಪರಿಶೀಲಿನೆ, ಅ.9ಕ್ಕೆ ಉಮೇದುವಾರಿಕೆ ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿದ್ದು, ಅಕ್ಟೋಬರ್ 23ರ ಬೆಳಗ್ಗೆ 8ಗಂಟೆಯಿಂದ ಸಂಜೆ 4ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಅ.27ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor