ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು : ಜೀವಂತವಾಗಿರುವ 1,054 ಜನರನ್ನು ಮೃತಪಟ್ಟಿದ್ದಾರೆಂದು ಸುಳ್ಳು ಹೇಳಿದ್ದಲ್ಲದೇ, ಸಂಬಂಧವೇ ಇಲ್ಲದ 8 ಮರಣ ಪ್ರಮಾಣ ಪತ್ರಗಳನ್ನು ನೀಡಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರನ್ನು ಕೈಬಿಡುವಂತೆ ಪ್ರಯತ್ನಿಸಿರುವ ವಿಜಯಪುರದ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾಗೃತ ಕರ್ನಾಟಕ ಸಂಚಾಲಕ ಡಾ.ಎಚ್.ವಿ.ವಾಸು ಆಗ್ರಹಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಕ್ರಮ ಎಸಗಲು ಆಯೋಗ ಬಿಜೆಪಿಯ ಯತ್ನಾಳ್ ಜೊತೆಗೆ ಶಾಮೀಲಾಗಿ ಸಹಕರಿಸುತ್ತಿದೆ. ಮತಪಟ್ಟಿಯಿಂದ ಹೆಸರು ತೆಗೆದುಹಾಕಲು ಒಬ್ಬ ಬೂತ್ ಮಟ್ಟದ ಏಜೆಂಟ್ ದಿನಕ್ಕೆ ಗರಿಷ್ಠ 10 ಮತ್ತು ಇಡೀ ಪ್ರಕ್ರಿಯೆಯಲ್ಲಿ ಗರಿಷ್ಠ 30 ಅರ್ಜಿಗಳನ್ನು ಮಾತ್ರ ಸಲ್ಲಿಸಲು ಅವಕಾಶವಿದೆ. ಆದರೆ, ಯಾವುದೇ ಶಾಸಕನಿಗೂ, ಸಾಮಾನ್ಯ ನಾಗರಿಕನಿಗೂ ಇಲ್ಲದ ಸೂಪರ್ ಪವರ್ ಬಳಸಿ, ಅಧಿಕೃತ ನಮೂನೆ-7 ಅರ್ಜಿಗಳನ್ನೇ ಸಲ್ಲಿಸದೆ, ಕೇವಲ ತಮ್ಮ ವೈಯಕ್ತಿಕ ಲೆಟರ್‌ಹೆಡ್‌ನಲ್ಲಿ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದರು.

ಆ.24ರಂದು ಕರಡು ಮತದಾರರ ಪಟ್ಟಿ ಬಿಡುಗಡೆಯಾದ ಕೇವಲ ಒಂದೇ ವಾರದಲ್ಲಿ ಪತ್ರ ಬರೆದು, ವಿಜಯಪುರ ನಗರದ 198 ಮತಗಟ್ಟೆಗಳಲ್ಲಿ 1,054 ಜನ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಸುಳ್ಳು ಆರೋಪ ಮತ್ತು ಲೆಟರ್‌ಹೆಡ್ ಪತ್ರವನ್ನೇ ಆಧರಿಸಿ ಸ್ಥಳೀಯ ಚುನಾವಣಾಧಿಕಾರಿಗಳು ಕ್ರಮ ಕೈಗೊಂಡು, ತನಿಖೆ ನಡೆಸಲು ಮುಂದಾಗಿರುವುದು ಕಾನೂನುಬಾಹಿರ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಮತದಾರರ ಪಟ್ಟಿಯನ್ನು ‘ಮೆಷಿನ್ ರೀಡಬಲ್ ಫಾರ್ಮ್ಯಾಟ್’ನಲ್ಲಿ ನೀಡುವಂತೆ ಮನವಿ ಮಾಡಿದರೂ ಆಯೋಗ ನೀಡಲಿಲ್ಲ ಎಂದು ವಾಸು ಬೇಸರ ವ್ಯಕ್ತಪಡಿಸಿದರು.

ಯತ್ನಾಳ್ ನೀಡಿದ 1,054 ಜನರ ಪೈಕಿ ಕೇವಲ 8 ಜನರಿಗೆ ಸಂಬಂಧಿಸಿದ ಮರಣ ಪ್ರಮಾಣ ಪತ್ರಗಳನ್ನು ಲಗತ್ತಿಸಿದ್ದರು. ಆ ದಾಖಲೆಗಳಲ್ಲಿದ್ದ ಹೆಸರು ಮತ್ತು ಗಂಡ/ತಂದೆಯ ಹೆಸರುಗಳಲ್ಲಿ ಗೊಂದಲವನ್ನು ಸ್ವತಃ ತಾವೇ ಸೃಷ್ಟಿಸಿ, ಬದುಕಿದ್ದ ಮಲಂದಿ ಜಮಾದಾರ್, ಮಹಬೂಬಿ ಶೇಖ್ ಮತ್ತು ರಜಿಯಾ ಶೇಖ್ ಅವರಂತಹ ನಾಗರಿಕರನ್ನು ಸತ್ತಿದ್ದಾರೆಂದು ಹೇಳಿ, ಸುದ್ದಿಗೋಷ್ಠಿ ನಡೆಸಿದ್ದಾರೆ. ಇಆರ್‌ಒ ಮತ್ತು ಡಿಇಒ ತಕ್ಷಣ ಸ್ಪಂದಿಸಿ ತನಿಖೆಗೆ ಇಳಿಸಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಗುಂಪಾಗಿ ನಮೂನೆ-7 ಅರ್ಜಿಗಳು ಬಂದಾಗ ಮೊದಲು ದೂರು ನೀಡಿದವರನ್ನು ವಿಚಾರಣೆ ಮಾಡಬೇಕು. ಈ ಬಗ್ಗೆ ರಾಜ್ಯ ಮುಖ್ಯಚುನಾವಣಾಧಿಕಾರಿ ಅನ್ಬುಕುಮಾರ್‌ರನ್ನು ಪ್ರಶ್ನಿಸಿದರೆ, ‘ಯಾರ ಹೆಸರೂ ಡಿಲೀಟ್ ಆಗಿಲ್ಲವಲ್ಲ’ ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯನ್ನೇ ದುರ್ಬಳಕೆ ಮಾಡಿಕೊಂಡು, ಅರ್ಹರನ್ನೂ-ಬದುಕಿರುವವರನ್ನೂ ಮತಪಟ್ಟಿಯಿಂದ ಹೊರಹಾಕಲು ಹೊರಟಿರುವ ಯತ್ನಾಳ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ವಾಸು ಆಗ್ರಹಿಸಿದರು.

ಪತ್ರಕರ್ತ ಇರ್ಫಾನ್ ಶೇಕ್ ಮಾತನಾಡಿ, ವಿಜಯಪುರ ನಗರ ಕ್ಷೇತ್ರದಲ್ಲಿ ಶಾಸಕ ಯತ್ನಾಳ್ ತಮಗೆ ಅನುಕೂಲ ಆಗುವಂತೆ ನೂರಾರು ಹಳ್ಳಿಗಳಿಂದ ಸುಮಾರು 60 ಸಾವಿರದಿಂದ 80 ಸಾವಿರ ಮಂದಿ ನಕಲಿ ಮತದಾರರನ್ನು ತಂದು ಸೇರಿಸಿದ್ದರು. ಆದರೆ ಈ ಬಾರಿಯ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಜಾಗರೂಕರಾದ ಬಿಎಲ್‌ಎಗಳು ಪರಿಶೀಲನೆ ನಡೆಸಿ ಅಂತಹ ಬೋಗಸ್ ಮತಗಳನ್ನು ಹೊರ ಹಾಕಿಸಿದರು. ಇದರಿಂದ ಮುಂಬರುವ ಚುನಾವಣೆಯಲ್ಲಿ ಸೋಲುವ ಭಯ ಯತ್ನಾಳ್‌ಗೆ ಆವರಿಸಿದೆ. ಆದುದರಿಂದಲೇ ಬದುಕಿರುವ ನೈಜ ಮತದಾರರನ್ನೇ ಸತ್ತಿದ್ದಾರೆಂದು ಸುಳ್ಳು ಹೇಳಲು ಪ್ರಾರಂಭಿಸಿರುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಾಗೃತ ಕರ್ನಾಟಕ ಪದಾಧಿಕಾರಿ ಮುತ್ತುರಾಜು, ಸಂತ್ರಸ್ತರಾದ ಮಹಬೂಬಿ ಶೇಕ್, ಮಲಂದಿ ಜಮಾದಾರ್, ರಜಿಯಾ ಶೇಕ್ ಉಪಸ್ಥಿತರಿದ್ದರು.

"ನಾನು 30 ವರ್ಷಗಳಿಂದಲೂ ಇಲ್ಲೇ ವಾಸವಾಗಿದ್ದೇನೆ. ಆದರೂ ನಾನು ಸತ್ತಿದ್ದೇನೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿ ಮಾಡಿ ಚುನಾವಣಾಧಿಕಾರಿಗಳಿಗೆ ನೀಡಿದ್ದಾರೆ. ಮಾಧ್ಯಮದವರು ಬಂದು ನಮಗೆ ತಿಳಿಸಿದಾಗಲೇ ಹೀಗೆ ಆಗಿದೆ ಎಂದು ಗೊತ್ತಾಗಿದ್ದು. ಗೊತ್ತಾದಗಿನಿಂದಲೂ ಸರಿಯಾಗಿ ಊಟ ಮಾಡಲಿಕ್ಕೂ ಆಗುತ್ತಿಲ್ಲ. ವಿಜಯಪುರದಿಂದ ನಾವು ಬೆಂಗಳೂರಿಗೆ ನ್ಯಾಯಕ್ಕಾಗಿ ಬಂದಿದ್ದೇವೆ. ನಕಲಿ ದಾಖಲೆ ಸೃಷ್ಟಿ ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು"

ರಜಿಯಾ ಶೇಕ್, ಸಂತ್ರಸ್ತೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor