ಸರಕಾರದಿಂದ ಕೆಐಎಡಿಬಿಗೆ 825 ಕೋಟಿ ರೂ. ಅನುದಾನ ಬಾಕಿ : ಡಾ.ಎಲ್.ಹನುಮಂತಯ್ಯ
ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಕೈಗಾರಿಕಾ ಭೂಮಿ ಸಹಾಯಧನಕ್ಕಾಗಿ ಸರಕಾರದಿಂದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ)ಗೆ 825ಕೋಟಿ ರೂ.ಅನುದಾನ ಬಾಕಿಯಿದ್ದು, ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಒತ್ತಾಯಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗದ ಕಾರಣ ಎಸ್ಸಿ/ಎಸ್ಟಿ ಉದ್ಯಮಿಗಳ ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದರು.
ಎಸ್ಸಿ/ಎಸ್ಟಿ ಉದ್ಯಮಿಗಳಿಗೆ ಮೀಸಲಾತಿ ಅನ್ವಯಿಸಿ ಒಟ್ಟು 391 ಎಕರೆ ಭೂ ಹಂಚಿಕೆ ಬಾಕಿಯಿದೆ. ಈ ಹಂಚಿಕೆಯ ಕೊರತೆಯನ್ನು ಸರಿಪಡಿಸಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದರೂ, ಅದನ್ನು ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ. 2009ಕ್ಕೂ ಮೊದಲು ಅಭಿವೃದ್ಧಿಪಡಿಸಲಾದ ಹಳೆಯ ಕೈಗಾರಿಕಾ ಪ್ರದೇಶಗಳಲ್ಲಿ ಎಸ್ಸಿ/ಎಸ್ಟಿ ಮೀಸಲಾತಿ ನೀಡಲು 2014ರಲ್ಲಿ ಕೆಐಎಡಿಬಿ ಮಂಡಳಿ ಕೈಗೊಂಡ ನಿರ್ಧಾರವನ್ನು ಇದುವರೆಗೂ ಅನುಷ್ಠಾನಗೊಳಿಸಿಲ್ಲ ಎಂದು ಎಲ್.ಹನುಮಂತಯ್ಯ ಹೇಳಿದರು.
ಎಸ್ಸಿ/ಎಸ್ಟಿ ಉದ್ಯಮಿಗಳು ತಮ್ಮ ಯೋಜನೆಗಳಿಗೆ ಅನುಮೋದನೆ ಪಡೆದು, ಹಲವು ವರ್ಷಗಳ ಹಿಂದೆಯೇ ಆರಂಭಿಕ ಮುಂಗಡ ಹಣ ಪಾವತಿಸಿ ಕೈಗಾರಿಕಾ ನಿವೇಶನ ಹಂಚಿಕೆಗಾಗಿ ಕಾಯುತ್ತಿದ್ದಾರೆ. ಇಂತಹ ಹಳೆಯ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸದೇ ಕೆಐಎಡಿಬಿ ಹೊಸ ಕೈಗಾರಿಕಾ ನಿವೇಶನಗಳ ಹಂಚಿಕೆಗೆ ಅಧಿಸೂಚನೆ ಹೊರಡಿಸಿರುವುದು ನ್ಯಾಯಸಮ್ಮತವಲ್ಲ ಎಂದು ಎಲ್.ಹನುಮಂತಯ್ಯ ಆಕ್ಷೇಪಿಸಿದರು.
ಸರಕಾರದಿಂದ ಕೆಐಎಡಿಬಿಗೆ ಬಾಕಿಯಿರುವ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಹಾಗೂ ಎಸ್ಸಿ.ಎಸ್ಟಿ ಅರ್ಹ ಉದ್ಯಮಿಗಳ ಯೋಜನೆಗಳನ್ನು ಭೂ ಹಂಚಿಕೆಗಾಗಿ ಅನುಮೋದನೆ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಬೇಕು ಎಂದು ಎಲ್.ಹನುಮಂತಯ್ಯ ಒತ್ತಾಯಿಸಿದರು.
ತಕರಾರಿರುವ, ಸಮತಟ್ಟಾಗಿಲ್ಲದ, ಮೂಲಭೂತ ಸೌಕರ್ಯಗಳಿಲ್ಲದ, ಸ್ವಾಧೀನ ನೀಡದ ಹಾಗೂ ಭೂ ಪರಿಹಾರ ಪಾವತಿ ಬಾಕಿಯಿರುವ ನಿವೇಶನಗಳ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಬೇಕು. ಸರಕಾರದಿಂದ ಕೆಐಎಡಿಬಿಗೆ ವಾಸ್ತವವಾಗಿ ಪಾವತಿಸಬೇಕಿರುವ ಬಾಕಿ ಅನುದಾನದ ನಿಖರ ಮೊತ್ತವನ್ನು ಕೆಐಎಡಿಬಿ ಸರಕಾರಕ್ಕೆ ಸಲ್ಲಿಸಬೇಕು ಎಂದು ಎಲ್.ಹನುಮಂತಯ್ಯ ತಿಳಿಸಿದರು.
ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಹಣಕಾಸು ಇಲಾಖೆಯೊಂದಿಗೆ ಪರಸ್ಪರ ಸಮನ್ವಯ ಸಾಧಿಸಿ. ಎಸ್ಸಿ/ಎಸ್ಟಿ ಉದ್ಯಮಿಗಳ ಬಾಕಿ ಅನುದಾನ, ಮೀಸಲಾತಿ, ಭೂ ಹಂಚಿಕೆ ಹಾಗೂ ಇತರೆ ಪ್ರೋತ್ಸಾಹ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಬೇಕು ಎಂದು ಹನುಮಂತಯ್ಯ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಸಿ.ಜಿ.ಶ್ರೀನಿವಾಸನ್ ಇದ್ದರು.