ಬೆಂಗಳೂರು : ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸುವ 2021ರ ಪೊಲೀಸ್ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲದಿದ್ದರೆ ನ.28ರಂದು ನಗರದಾದ್ಯಂತ ಬೃಹತ್ ನಾಗರಿಕ ಅಸಹಕಾರ ಚಳವಳಿ ಆರಂಭಿಸಲಾಗುವುದು ಎಂದು ‘ಹೋರಾಟದ ಹಕ್ಕಿಗಾಗಿ ಜನಾಂದೋಲನ’ ಎಚ್ಚರಿಕೆ ನೀಡಿದೆ.

ಸೋಮವಾರ ನಗರದ ಗಾಂಧಿ ಭವನದಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ, ನಾಗರಿಕ ಸ್ವಾತಂತ್ರ್ಯ, ಪರಿಸರ ಹಕ್ಕು, ಎಲ್‌ಜಿಬಿಟಿಕ್ಯೂ ಸೇರಿದಂತೆ ವಿವಿಧ ಸಂಘಟನೆಗಳ ಸುಮಾರು 100 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸುವ ಆದೇಶವನ್ನು ಹಿಂಪಡೆಯುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಸಭೆ ನಿರ್ಧರಿಸಿತು. ನ.26ರ ಸಂವಿಧಾನ ದಿನದವರೆಗೆ ಸರಕಾರಕ್ಕೆ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಆದೇಶ ಹಿಂಪಡೆಯದಿದ್ದರೆ ನಾಗರಿಕ ಅಸಹಕಾರ ಚಳವಳಿ ಆರಂಭಿಸುವುದಾಗಿ ಸಂಘಟನೆ ತಿಳಿಸಿದೆ.

ಲೇಖಕ ರಾಮಚಂದ್ರ ಗುಹಾ ಮಾತನಾಡಿ, ಬೆಂಗಳೂರಿನಲ್ಲಿ ಪ್ರತಿಭಟನೆಗಳ ಮೇಲೆ ವಿಧಿಸಿರುವ ನಿರ್ಬಂಧವು ಕಾಂಗ್ರೆಸ್ ಸರಕಾರದ ದ್ವಂದ್ವ ನೀತಿಯನ್ನು ಬಯಲುಮಾಡುತ್ತದೆ. ಮೌರ್ಯ ಸರ್ಕಲ್, ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುವ ಹಕ್ಕನ್ನು ನಾಗರಿಕರು ಪ್ರತಿಪಾದಿಸಬೇಕು. ಫ್ರೀಡಂ ಪಾರ್ಕ್ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ದಾಖಲಿಸಿರುವ ಎಲ್ಲ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷೆ ಮೈತ್ರೇಯಿ ಕೃಷ್ಣನ್ ಮಾತನಾಡಿ, ಪ್ರತಿಭಟನೆಗಳು, ಪ್ರದರ್ಶನಗಳು ಮತ್ತು ಪ್ರತಿಭಟನಾ ಮೆರವಣಿಗೆಗಳ ಪರವಾನಿಗೆ ಮತ್ತು ನಿಯಂತ್ರಣ (ಬೆಂಗಳೂರು ನಗರ) ಆದೇಶ, 2021ಡಿ ಅಡಿಯಲ್ಲಿ ಈ ನಿರ್ಬಂಧ ಜಾರಿಯಲ್ಲಿದೆ. ಹೈಕೋರ್ಟ್ ಈ ಆದೇಶವನ್ನು ಪಾಲಿಸುವಂತೆ ನಿರ್ದೇಶಿಸಿದೆಯೇ ಹೊರತು, ಅದನ್ನು ತಿದ್ದುಪಡಿ ಮಾಡುವುದಕ್ಕೆ ಅಥವಾ ರದ್ದುಗೊಳಿಸುವುದಕ್ಕೆ ನಿರ್ಬಂಧ ವಿಧಿಸಿಲ್ಲ. ಆದೇಶವನ್ನು ಹಿಂಪಡೆಯುವ ಅಧಿಕಾರ ಪೊಲೀಸ್ ಆಯುಕ್ತರಿಗೆ ಇದೆ ಎಂದು ತಿಳಿಸಿದರು.

ವಕೀಲ ವಿನಯ್ ಶ್ರೀನಿವಾಸ ಮಾತನಾಡಿದರು.

ಸಭೆಯಲ್ಲಿ ಜೆಸಿಟಿಯು ಸಂಚಾಲಕ ಕೆ.ವಿ.ಭಟ್, ನಾವೆದ್ದು ನಿಲ್ಲದಿದ್ದರೆ ಸಂಘಟನೆಯ ಮಮತಾ ಯಜಮಾನ್, ಅಖಿಲ ಭಾರತ ವಿದ್ಯಾರ್ಥಿ ಸಂಘದ ಸಾನಿಯಾ, ಸಾಧನಾ ಮಹಿಳಾ ಸಂಘದ ಸುಜಾತಾ, ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಎಸ್.ಬಾಬು, ಶಿಕ್ಷಣ ತಜ್ಞ ಶ್ರೀಪಾದ್ ಭಟ್, ನಾಗೇಶ್ ಅರಳಕುಪ್ಪೆ, ಯೋಗಾನಂದ ಹಲವರು ಭಾಗವಹಿಸಿದ್ದರು.

ಪುರಭವನದಿಂದ ಫ್ರೀಡಂ ಪಾರ್ಕ್ ವರೆಗೆ ತ್ರಿವರ್ಣ ಧ್ವಜ ಹಿಡಿದು ಸಾಗುತ್ತಿದ್ದ ಯುವಜನರು ಮತ್ತು ನಾಗರಿಕರಿಗೆ ಪೊಲೀಸರು ಕಿರುಕುಳ ನೀಡಿ ಬೆದರಿಸಿದ್ದಾರೆ. ಮತ್ತೊಂದೆಡೆ ಆರೆಸ್ಸೆಸ್ ಕಾರ್ಯಕರ್ತರಿಗೆ ಲಾಠಿಗಳೊಂದಿಗೆ ಮೆರವಣಿಗೆ ನಡೆಸಲು ಅವಕಾಶ ನೀಡಿರುವುದು ಪ್ರಶ್ನಾರ್ಹ.

ನಿರಂಜನಾರಾಧ್ಯ, ಶಿಕ್ಷಣ ತಜ್ಞ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor