ಸದನದಲ್ಲಿ ಶಿಸ್ತು ರೂಪಿಸಲು ಕಾಲೇಜು ಕಲಿಸಿದ ಪಾಠ ನೆರವಾಗಿದೆ: ಯು.ಟಿ.ಖಾದರ್
ಬೆಂಗಳೂರು: ಕಾಲೇಜು ನಮಗೆ ಕಲಿಸಿದ್ದ ಶಿಸ್ತಿನ ಪಾಠವು ಸದನದಲ್ಲಿ ಶಿಸ್ತು ರೂಪಿಸುವುದಕ್ಕೆ ನೆರವಾಗಿದೆ ಎಂದು ವಿಧಾನಸಭೆಯ ಸ್ವೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಆಯೋಜಿಸಿದ್ದ ‘ಮೂಡಬಿದಿರೆ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲೇಜು ವಿದ್ಯಾರ್ಥಿಗಳಾಗಿದ್ದಾಗ ನಾವು ಸಾಕಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರಾಧ್ಯಾಪಕರು ನಮಗೆ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮೆಲ್ಲ ತಪ್ಪುಗಳನ್ನು ತಿದ್ದಿ ಅಗತ್ಯವಿದ್ದಾಗ ನಮ್ಮ ಪೋಷಕರನ್ನೂ ಕರೆಸಿ ಬುದ್ದಿ ಹೇಳಿದ್ದರಿಂದಲೇ ಸಮಾಜದಲ್ಲಿ ಈ ಸಾಧನೆಯೊಂದಿಗೆ ಗುರುತಿಸುವಂತಾಗಿದೆ ಎಂದರು.
ಮಹಾವೀರ ಕಾಲೇಜು ವಿದ್ಯಾರ್ಥಿಗಳಾಗಿದ್ದವರು ಇಂದು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ. ಅಂದು ಕಾಲೇಜು ನಮಗೆ ಕಲಿಸಿಕೊಟ್ಟ ಪಾಠ ಇಂದಿಗೂ ದಾರಿದೀವಿಗೆಯಾಗಿದ್ದು, ಸದಾ ನೆನಪಿನಲ್ಲಿ ಉಳಿಯುವಂತಹುದು. ಕಾಲೇಜು ವಿಧ್ಯಾರ್ಥಿಗಳಾಗಿದ್ದಾಗ ಹಲವು ಸಾಹಸಗಳನ್ನು ಮಾಡಿದ್ದೇವೆ. ವಸತಿ ನಿಲಯ, ತರಗತಿಗಳಲ್ಲೂ ಕೆಲವೊಮ್ಮೆ ಶಿಸ್ತು ಮೀರಿ ವರ್ತಿಸಿದ್ದೂ ಇದೆ. ಆ ಸಂದರ್ಭದಲ್ಲಿ ಪ್ರಾಂಶುಪಾಲರು, ಪ್ರಾಧ್ಯಾಪಕರು ನಮಗೆ ಬುದ್ಧಿ ಹೇಳಿ ಸರಿ ದಾರಿಗೆ ತಂದಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಶಿಕ್ಷಣ ಬಡ ಮಕ್ಕಳ ಕೈಗೆಟುಕದ ಇಂದಿನ ದಿನಗಳಲ್ಲಿ ಮಹಾವೀರ ಕಾಲೇಜು ಈ ಭಾಗದ ನೂರಾರು ಬಡ ಮಕ್ಕಳ ಕಾಲೇಜು ಶಿಕ್ಷಣದ ಕನಸು ನನಸು ಮಾಡುತ್ತಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ. ಸೇರಿದಂತೆ ಮತ್ತಿತರರು ಇದ್ದರು.