ʼಕಾಫಿ ಡೇʼ ಸಿಇಒ ಮಾಳವಿಕಾ ಹೆಗ್ಡೆ ವಿರುದ್ಧದ ಫೆಮಾ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ
ಮಾಳವಿಕಾ ಹೆಗ್ಡೆ (Photo credit: Economic Times)
ಬೆಂಗಳೂರು: ಮಾರಿಷಸ್ ದೇಶದ ವಿವಿಧ ಕಂಪನಿಗಳಿಂದ ಪಡೆದಿರುವ 960 ಕೋಟಿ ರೂ. ಹೂಡಿಕೆ ಹಣವನ್ನು ಭಾರತದ ಕಂಪನಿಗಳಲ್ಲಿ ಷೇರು ಖರೀದಿಸಲು ವಿನಿಯೋಗಿಸಿದ ಆರೋಪ ಪ್ರಕರಣದಲ್ಲಿ 'ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್' (ಸಿಡಿಇಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಳವಿಕಾ ಹೆಗ್ಡೆ ಅವರಿಗೆ ಜಾರಿ ನಿರ್ದೇಶನಾಲಯ (ಈಡಿ) ನೀಡಿರುವ ಶೋಕಾಸ್ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ 2022ರ ನವೆಂಬರ್ 3ರ ದೂರು ಮತ್ತು ನವೆಂಬರ್ 23ರಂದು ಜಾರಿ ಮಾಡಿರುವ ಶೋಕಾಸ್ ನೋಟಿಸ್ ರದ್ದು ಕೋರಿ ಮಾಳವಿಕಾ ಹೆಗ್ಡೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಪತಿ ಸಿದ್ಧಾರ್ಥ ಅವರು 2019ರಲ್ಲಿ ನಿಧನರಾಗಿದ್ದು, ಅವರ ವಾರಸುದಾರರು ಎಂದು ಮಾಳವಿಕಾಗೆ ಫೆಮಾ ಸೆಕ್ಷನ್ 16ರ ಅಡಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಮೃತಪಟ್ಟಿರುವವರ ವಿರುದ್ಧದ ಪ್ರಕರಣವನ್ನು ಅವರ ವಾರಸುದಾರರ ವಿರುದ್ಧ ಮುಂದುವರಿಸಲು ಕಾನೂನಿನ ಅಡಿ ಅವಕಾಶವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ. ಈ ವಾದವನ್ನು ಆಲಿಸಿ ಅರ್ಜಿದಾರರಿಗೆ ಸೀಮಿತವಾಗಿ 2022ರ ನವೆಂವರ್ 23ರ ಶೋಕಾಸ್ ನೋಟಿಸ್ ಮತ್ತು ಅದರಡಿಯ ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ಮಧ್ಯಂತರ ಆದೇಶ ಮಾಡಿತು.
ಇದಕ್ಕೂ ಮುನ್ನ ಮಾಳವಿಕಾ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ, ಕೆಫೆ ಕಾಫಿ ಡೇ ಅನ್ನು ವಿ.ಜಿ. ಸಿದ್ಧಾರ್ಥ ಅವರು ಆರಂಭಿಸಿ, ಮುನ್ನಡೆಸುತ್ತಿದ್ದರು. 2010ರಲ್ಲಿ ಕಂಪನಿಯಲ್ಲಿ ವಿದೇಶಿ ಹೂಡಿಕೆ ನಡೆದಿತ್ತು. ಈ ಸಂಬಂಧ 2022ರ ನವೆಂಬರ್ 3ರಂದು ಇಡಿ ದೂರು ದಾಖಲಿಸುವ ವೇಳೆಗೆ ಸಿದ್ಧಾರ್ಥ ಅವರು ನಿಧನರಾಗಿದ್ದರು. ಸಿದ್ಧಾರ್ಥ ಅವರ ವಾರಸುದಾರರು ಎಂದು ಮಾಳವಿಕಾ ವಿರುದ್ಧ ದೂರು ದಾಖಲಿಸಲಾಗದು ಎಂದರು.
ಕಂಪನಿಯ ವಿರುದ್ಧ ದೂರು ಇದ್ದು, ಸಿದ್ಧಾರ್ಥ ಅವರ ಪತ್ನಿ ಹಾಗೂ ವಾರಸುದಾರೆ ಎಂದು ಅವರನ್ನೂ ಎಳೆದು ತರಲಾಗಿದೆ. ಆರೋಪಿತ ಅಕ್ರಮ ನಡೆದ ಸಂದರ್ಭದಲ್ಲಿ ಸಿದ್ಧಾರ್ಥ ಅವರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದರು. ಫೆಮಾ ಸೆಕ್ಷನ್ 43ರ ಅಡಿ ಸಿದ್ಧಾರ್ಥ ಅವರ ವಿರುದ್ಧ ಕ್ರಮ ಜರುಗಿಸಬಹುದಿತ್ತು. ಸಿದ್ಧಾರ್ಥ ಅವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಪ್ರಕ್ರಿಯೆ ನಡೆಸಲಾಗದು ಎಂದರು.
ಸಿದ್ಧಾರ್ಥ ಅವರ ವಾರಸುದಾರರಾಗಿ ಬಂದು ಪ್ರತಿಕ್ರಿಯಿಸಬೇಕು ಎಂದು 2010ರಲ್ಲಿ ನಡೆದಿದೆ ಎನ್ನಲಾದ ಆರೋಪಕ್ಕೆ ಮಾಳವಿಕಾಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಇದರ ಬಗ್ಗೆ ಮಾಳವಿಕಾಗೆ ಏನು ಗೊತ್ತಿದೆ? ಈ ಪ್ರಕ್ರಿಯೆಯನ್ನು ಮಾಳವಿಕಾ ಎದುರಿಸಬೇಕು ಎನ್ನಲಾಗದು. ಆದ್ದರಿಂದ, ಶೋಕಾಸ್ ನೋಟಿಸ್‌ಗೆ ತಡೆ ನೀಡಬೇಕು ಎಂದು ಕೋರಿದರು.
ಪ್ರಕರಣವೇನು?
2010ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಮಾರಿಷಸ್‌ನ ಸ್ಟ್ಯಾಂಡರ್ಡ್ ಚಾರ್ಟರ್ಡ್ ಪ್ರೈವೇಟ್ ಈಕ್ವಿಟಿ, ಕೆಕೆಆರ್ ಮಾರಿಷಸ್ ಪಿಇ ಇನ್‌ವೆಸ್ಟ್‌ಮೆಂಟ್, ಅರ್ಡ್ಯೋನೊ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಎನ್‌ಎಸ್‌ಆರ್ ಪಿಇ ಮಾರಿಷಸ್ ಎಲ್‌ಎಲ್‌ಸಿಯಿಂದ ಒಟ್ಟಾರೆ 960 ಕೋಟಿ ರೂ. ವಿದೇಶಿ ನೇರ ಹೂಡಿಕೆಯ ಹಣವನ್ನು ಸಿಡಿಇಎಲ್ ಪಡೆದಿತ್ತು. ಇದನ್ನು ಭಾರತದ ಬೇರೆ ಕಂಪನಿಗಳಲ್ಲಿ ಷೇರು ಖರೀದಿಸಲು ಬಳಕೆ ಮಾಡಿದೆ ಎಂದು ಈಡಿ ಆರೋಪಿಸಿದೆ. ಹಣ ವರ್ಗಾವಣೆ ನಡೆದು 12 ವರ್ಷಗಳ ಬಳಿಕ ದೂರು ದಾಖಲಿಸಿರುವ ಇಡಿ, ಮಾಳವಿಕಾ ಅವರಿಗೆ ಶೋಕಾಸ್ ನೋಟಿಸ್ ಮತ್ತು ನೋಟಿಸ್‌ಗಳನ್ನು ಜಾರಿ ಮಾಡಿದೆ. ಇದನ್ನು ಮಾಳವಿಕಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.