‘ಏಳು ತಿಂಗಳಿಗೆ ಹುಟ್ಟಿದರೆ ಹೀಗೇನೇ?’ : ಸಚಿವ ಬೈರತಿ ಸುರೇಶ್ ವಿರುದ್ಧ ಬಿಜೆಪಿಯ ಸುರೇಶ್ ಕುಮಾರ್ ಆಕ್ಷೇಪಾರ್ಹ ಮಾತು
ಸುರೇಶ್ ಕುಮಾರ್
ಬೆಂಗಳೂರು : ‘ಏಳು ತಿಂಗಳಿಗೆ ಹುಟ್ಟಿದರೆ ಹೀಗೇನೇ..ಒಂಬತ್ತು ತಿಂಗಳಿಗೆ ಹುಟ್ಟಿದರೆ ಸರಿಯಾಗುತ್ತಿತ್ತು’ ಎಂದು ಬಿಜೆಪಿಯ ಹಿರಿಯ ಸದಸ್ಯ ಎಸ್.ಸುರೇಶ್ ಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕುರಿತು ಆಡಿದ ಮಾತು ವಿಧಾನಸಭೆಯಲ್ಲಿ ಕೆಲಕಾಲ ಗದ್ಧಲ-ಕೋಲಾಹಲಕ್ಕೆ ಕಾರಣವಾಯಿತು.
ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ವಿವಾದದ ಕುರಿತು ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರುಗಳ ನಡುವೇ ಆರೋಪ-ಪ್ರತ್ಯಾರೋಪದ ಸಂದರ್ಭದಲ್ಲಿ ಸುರೇಶ್ ಕುಮಾರ್ ಮಾತನಾಡುತ್ತಿದ್ದರು. ಇದಕ್ಕೆ ಆಕ್ಷೇಪಿಸಿ ಸಚಿವ ಬೈರತಿ ಸುರೇಶ್ ಮಧ್ಯಪ್ರವೇಶ ಮಾಡಿದರು. ಇದರಿಂದ ಕೆರಳಿದ ಎಸ್.ಸುರೇಶ್ ಕುಮಾರ್ ಮಾತಿನ ಭರದಲ್ಲಿ ‘ಒಂಭತ್ತು ತಿಂಗಳಿಗೆ ಹುಟ್ಟಿದ್ದರೇ ಸರಿಯಾಗಿರುತ್ತಿತ್ತು, ಏಳು ತಿಂಗಳಿಗೆ ಹುಟ್ಟಿದರೇ ಹೀಗೇನೇ’ ಎಂದು ಲೇವಡಿ ಮಾಡಿದರು.
ಇದರಿಂದ ಆಕ್ರೋಶಿತರಾದ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಬೈರತಿ ಸುರೇಶ್, ಎಚ್.ಸಿ.ಬಾಲಕೃಷ್ಣ, ಶಿವಲಿಂಗೇಗೌಡ ಸೇರಿದಂತೆ ಕಾಂಗ್ರೆಸ್ ಸದಸ್ಯರು, ಬಿಜೆಪಿಯ ಎಸ್.ಸುರೇಶ್ ಕುಮಾರ್ ವಿರುದ್ಧ ಮುಗಿಬಿದ್ದರು. ಅಲ್ಲದೆ, ಆ ಪದವನ್ನು ಕಡತದಿಂದ ತೆಗೆದುಹಾಕಬೇಕು. ಕ್ಷಮೆ ಕೋರಬೇಕು ಎಂದು ಪಟ್ಟುಹಿಡಿದರು.
ರಾಜ್ಯಪಾಲರ ಭಾಷಣ ವಿವಾದದ ಬಗ್ಗೆ ಮಾತನಾಡುತ್ತಾ ಸುರೇಶ್ ಕುಮಾರ್, ‘ದುರದೃಷ್ಟವಶಾತ್ ರಾಜ್ಯಪಾಲರು ಸದನಕ್ಕೆ ಬಂದು ಸಮರ್ಥನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರ ವಿರುದ್ಧದ ಆರೋಪ ಮಾಡುವುದು ಸರಿಯಲ್ಲ. ರಾಜ್ಯಪಾಲರು ತಮ್ಮ ಭಾಷಣವನ್ನು ಮಂಡನೆ ಮಾಡಿದ್ದು, ಪೂರ್ತಿ ಭಾಷಣ ಓದಿದ ರೀತಿ ಆಗಿದೆ ಎಂದು ಈಗಾಗಲೆ ಸ್ಪೀಕರ್ ಅವರೇ ಹೇಳಿದ್ದಾರೆ’ ಎಂದು ಉಲ್ಲೇಖಿಸಿದರು.
ಇದಕ್ಕೆ ಆಕ್ಷೇಪಿಸಿ ಸಚಿವ ಭೈರತಿ ಸುರೇಶ್ ಮಧ್ಯಪ್ರವೇಶ ಮಾಡಿದರು. ಆಗ ಸುರೇಶ್ ಕುಮಾರ್, ‘ಒಂಭತ್ತು ತಿಂಗಳಿಗೆ ಹುಟ್ಟಿದ್ದರೆ ಸರಿಯಾಗುತ್ತಿತ್ತು, ಏಳು ತಿಂಗಳಿಗೆ ಹುಟ್ಟಿದ್ದೀರಾ? ಎಂದು ವ್ಯಂಗ್ಯವಾಗಿ ತಿವಿದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು, ಹಿರಿಯ ಸದಸ್ಯ ಸುರೇಶ್ ಕುಮಾರ್, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಗೆ ಹೀಗೆ ಮಾತನಾಡುವುದು ಸಲ್ಲ. ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಕಡತದಿಂದ ತೆಗೆಯಲು ಸೂಚನೆ :
ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯಪಾಲರ ಭಾಷಣದ ಕುರಿತು ಬಿಜೆಪಿಯ ಸದಸ್ಯ ಸುರೇಶ್ ಕುಮಾರ್ ಮಾತಿಗೆ ನಮ್ಮದೇನು ತಕರಾರು ಇಲ್ಲ. ಆದರೆ, ಬೈರತಿ ಸುರೇಶ್ ಕುರಿತು ‘ಏಳು ತಿಂಗಳಿಗೆ ಹುಟ್ಟಿದ್ದಾರೆ’ ಎಂದು ಹೇಳಿದ್ದು, ಸರಿಯಲ್ಲ. ಆ ಪದವನ್ನು ಕಡತದಿಂದ ತೆಗೆದು ಹಾಕಬೇಕು. ಚರ್ಚೆ ಇನ್ನೂ ಮುಂದುವರಿಸುವುದು ಬೇಡ’ ಎಂದು ಸಲಹೆ ನೀಡಿದರು. ಬಳಿಕ ಸ್ಪೀಕರ್ ಖಾದರ್ ಅವರು, ‘ಈ ಪದವನ್ನು ಕಡತದಿಂದ ತೆಗೆದು ಹಾಕಲಾಗುವುದು ಎಂದು ರೂಲಿಂಗ್ ನೀಡಿದ್ದರಿಂದ ಚರ್ಚೆಗೆ ತೆರೆಬಿತ್ತು.