ಬೆಂಗಳೂರು : ಯುವಕರು ತಮ್ಮ ತಲೆಯಲ್ಲಿ ಡ್ರೀಮ್, ಡಿಸಿಪ್ಲಿನ್ ಸೇರಿದಂತೆ ನಾಲ್ಕು ‘ಡಿ’ಗಳನ್ನು ತಲೆಯಲ್ಲಿ ಇಟ್ಟಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.

ಶನಿವಾರ ಬೆಂಗಳೂರಿನ ಹೊವಲಯದ ಸಾತನೂರಿನಲ್ಲಿ ರೂರಲ್ ಎಜುಕೇಷನ್ ಸೊಸೈಟಿ ವತಿಯಿಂದ ಆರಂಭಿಸಿರುವ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ತಮ್ಮ ತಲೆಯಲ್ಲಿ ನಾಲ್ಕು 'ಡಿ'ಗಳನ್ನು ಇಟ್ಟುಕೊಳ್ಳಬೇಕು. ಡ್ರೀಮ್ (ಕನಸು), ಡಿಸೈರ್ (ಆಸೆ), ಡೆಡಿಕೇಷನ್ (ಸಮರ್ಪಣೆ), ಡಿಸಿಪ್ಲಿನ್ (ಶಿಸ್ತು). ಮೊದಲು ಕನಸು ಕಾಣಬೇಕು, ಆ ಕನಸನ್ನು ನನಸಾಗಿಸುವ ಆಸೆ ಹೊಂದಬೇಕು. ಅದಕ್ಕಾಗಿ ಸಮರ್ಪಣಾ ಮನೋಭಾವದಿಂದ ಶಿಸ್ತಿನಿಂದ ದುಡಿಯಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯೆ ಎಂಬುದು ಯಾರು ಕಳ್ಳತನ ಮಾಡಲಾಗದ, ಅಗ್ನಿಯಲ್ಲಿ ಸುಡಲಾಗದ, ನೀರಿನಲ್ಲಿ ನೆನೆಯಲಾಗದ ಗುಪ್ತನಿಧಿ ಎಂದು ಹಿರಿಯರು ಹೇಳುತ್ತಿದ್ದರು. ಆ ಅಮೂಲ್ಯ ಸಂಪತ್ತನ್ನು ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಕಳೆದುಕೊಳ್ಳಬೇಡಿ. ನಾನು ಪದವಿ ಪಡೆಯಲು ಸಾಧ್ಯವಾಗದೆ 43ರಿಂದ 47ನೆ ವಯಸ್ಸಿನಲ್ಲಿ ಪದವಿ ಪೂರ್ಣಗೊಳಿಸಿದೆ. ಆದರೆ ನೀವು ಸಮಯಕ್ಕೆ ಸರಿಯಾಗಿ ಪದವಿ ಪಡೆದು ಉತ್ತಮ ವಿದ್ಯಾವಂತರಾಗಿ, ಬುದ್ಧಿವಂತರಾಗಿ ಕನಕಪುರಕ್ಕೆ ಮಾತ್ರವಲ್ಲ, ದೇಶಕ್ಕೇ ಆಸ್ತಿಯಾಗಬೇಕು ಎಂದು ಅವರು ಹಾರೈಸಿದರು.

ಯುವಕರು ರಾಜಕೀಯದಲ್ಲಿದ್ದರೆ ಮಾತ್ರ ನಾಯಕರಲ್ಲ. ತಮ್ಮ ಬದುಕಿನಲ್ಲೂ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ನಿಮ್ಮೆಲ್ಲರಲ್ಲೂ ಕೌಶಲ್ಯ ಬೆಳೆಯಬೇಕು. ಇಂದಿನ ಸ್ಪರ್ಧೆ ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿಲ್ಲ, ವಿಶ್ವಮಟ್ಟದಲ್ಲಿದೆ. ಅದಕ್ಕೆ ತಕ್ಕಂತೆ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಬೇಕು. ಯುವಕರು ಮತ್ತು ವಿದ್ಯಾರ್ಥಿಗಳೇ ನಮ್ಮ ರಾಜ್ಯದ ಭವಿಷ್ಯ ರೂಪಿಸುವ ಶಕ್ತಿ. ಕೌಶಲ್ಯಾಭಿವೃದ್ಧಿ ಕೇಂದ್ರದ ಮೂಲಕ ತರಬೇತಿ ಪಡೆಯುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕನಕಪುರ ಮತ್ತು ಸುತ್ತಮುತ್ತಲಿನ ಪ್ರದೇಶದ ಯುವಕರು ಉದ್ಯೋಗ ಅರಸಿ ಬೇರೆ ಊರುಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತವರು ಜಿಲ್ಲೆಯಲ್ಲೇ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳುವ ವಾತಾವರಣ ನಿರ್ಮಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಕೌಶಲ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.

ಕೃಷಿ ಕ್ಷೇತ್ರದ ಜತೆಗೆ ಕೌಶಲ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಹಲವು ಖಾಸಗಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಸಾತನೂರಿನಲ್ಲಿಯೂ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುವುದು. ನಮ್ಮ ಯುವಕರು ಎಲ್ಲಿಗೆ ಹೋದರೂ ಉದ್ಯೋಗ ಸಿಗುವಂತಾಗಬೇಕು. ವಿಶೇಷವಾಗಿ ಕನಕಪುರದ ಯುವಕರಿಗೆ ಸ್ಥಳೀಯವಾಗಿಯೇ ಕೆಲಸ ದೊರೆಯಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ರವಿ, ವಿಧಾನ ಪರಿಷತ್ತಿನ ಸದಸ್ಯ ಸಿ.ಸುಧಾಮ್ ದಾಸ್, ಆರ್‍ಇಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಎಚ್.ಕೆ.ಶ್ರೀಕಂಠ ಸೇರಿದಂತೆ ಪ್ರಮುಖರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor