ಅಕ್ರಮ ಹಣ ಗಳಿಕೆ ಹಾಗೂ ವರ್ಗಾವಣೆ ಆರೋಪ; ಖಾಸಗಿ ಕಂಪೆನಿಯ ಅಧ್ಯಕ್ಷ ಸಹಿತ 8 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ಈ.ಡಿ.
ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಅಕ್ರಮ ಹಣ ಗಳಿಕೆ ಹಾಗೂ ವರ್ಗಾವಣೆ ಆರೋಪದ ಮೇಲೆ ರಿಯಲ್ ಎಸ್ಟೇಟ್ ಸಂಸ್ಥೆಯಾದ ‘ಓರೆನ್ ಗ್ರೂಪ್’ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಾಸುದೇವನ್ ಎಸ್. ಸಹಿತ ಎಂಟು ಮಂದಿಯ ವಿರುದ್ಧ ಜಾರಿ ನಿರ್ದೇಶನಾಲಯವು(ಈ.ಡಿ.) ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.
ಕರ್ನಾಟಕ ಪೊಲೀಸರು ಮತ್ತು ಕೇಂದ್ರೀಯ ತನಿಖಾ ದಳ(ಸಿಬಿಐ) ದಾಖಲಿಸಿದ ಹಲವಾರು ಎಫ್‌ಐಆರ್ ಆಧಾರದ ಮೇಲೆ ಈ.ಡಿ. ತನಿಖೆ ಯನ್ನು ಪ್ರಾರಂಭಿಸಿದೆ. ವಸತಿ ಯೋಜನೆಗಳನ್ನು ಪೂರ್ಣಗೊಳಿ ಸದಿರುವುದು, ಬುಕ್ ಮಾಡಿದ ಅಪಾರ್ಟ್‌ಮೆಂಟ್‌ಗಳನ್ನು ಹಸ್ತಾಂತರಿಸದಿರುವುದು ಹಾಗೂ ಮನೆ ಖರೀದಿ ದಾರರಿಂದ ಸಂಗ್ರಹಿಸಿದ ಹಣವನ್ನು ಹಿಂತಿರುಗಿಸದಿರು ವುದು ಸೇರಿದಂತೆ, ವಂಚನೆ ಮತ್ತು ಅಪರಾಧ ಪಿತೂರಿಗೆ ಸಂಬಂಧಿಸಿದಂತೆ ‘ಓರೆನ್ ಗ್ರೂಪ್’ ವಿರುದ್ಧ ಪ್ರಕರಣ ದಾಖಲಾಗಿತ್ತು. ಎಸ್.ವಾಸುದೇವನ್ ಅವರ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿರುವ ’ಓರೆನ್ ಗ್ರೂಪ್’ ಸಂಸ್ಥೆಗಳು, ಮನೆ ಖರೀದಿದಾರರಿಗೆ ಆಮಿಷವೊಡ್ಡಿ ವಿವಿಧ ಯೋಜನೆಗಳ ಅಡಿಯಲ್ಲಿ ವಸತಿ ಘಟಕಗಳನ್ನು ಕಾಯ್ದಿರಿಸುವಂತೆ ಪ್ರೇರೇಪಿಸಿವೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಆಸ್ತಿಯ ಹಸ್ತಾಂತರವಾಗುವವರೆಗೂ ’ಇಎಂಐ’ ಪಾವತಿಗಳನ್ನು ತಾವೇ ಭರಿಸುವುದಾಗಿ ಭರವಸೆ ನೀಡುವ ಮೂಲಕ ಈ ಪ್ರೇರೇಪಣೆ ನೀಡಲಾಗಿತ್ತು. ಓರೆನ್ ಅರ್ಬನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್, ಓರೆನ್ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್, ಓರೆನ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಓರೆನ್ ಎಲಿಗಂಟ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್, ಓರೆನ್ ರಿಯಾಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಗಳು ಹಾಗೂ ಮುಖ್ಯ ಪ್ರವರ್ತಕರಾದ ಎಸ್. ವಾಸುದೇವನ್ ಕಾಯ್ದಿರಿಸಿದ ಅಪಾರ್ಟ್‌ಮೆಂಟ್‌ಗಳು ಅಥವಾ ವಸತಿ ಘಟಕಗಳನ್ನು ಹಸ್ತಾಂತರಿಸದೆಯೇ ಹಣವನ್ನು ಸಂಗ್ರಹಿಸುವ ಮೂಲಕ, ಮನೆ ಖರೀದಿದಾರರಿಗೆ ಒಟ್ಟು ಸುಮಾರು 1,305 ಕೋಟಿ ರೂ.ಯಷ್ಟು ವಂಚನೆ ಎಸಗಿದ್ದಾರೆ ಎಂಬುದು ತನಿಖೆಯಿಂದ ದೃಢಪಟ್ಟಿದೆ.
ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಖಾತೆಯ ಪುಸ್ತಕಗಳು, ಟ್ಯಾಲಿ ಡೇಟಾ, ಲೆಡ್ಜರ್‌ಗಳು ಮತ್ತು ಯೋಜನಾ ದಾಖಲೆಗಳ ವಿಶ್ಲೇಷಣೆಯು ಸಂಗ್ರಹಿಸಿದ ಹಣವನ್ನು ಕಾರ್ಪೊರೇಟ್ ಠೇವಣಿಗಳು ಮತ್ತು ಇತರ ವಹಿವಾಟುಗಳ ಮೂಲಕ ವರ್ಗಾವಣೆ ಮಾಡಲಾಗಿದೆ. ಈ ಹಣವನ್ನು ಸಾಲ ಮರುಪಾವತಿ, ಬಡ್ಡಿ ಮತ್ತು ಹಣಕಾಸು ವೆಚ್ಚಗಳು, ಹೂಡಿಕೆದಾರರ ಮರುಪಾವತಿ ಮತ್ತು ಇತರ ಕಾರ್ಪೊರೇಟ್ ಹೊಣೆಗಾರಿಕೆಗಳಿಗೆ ಬಳಸಲಾಗಿದೆ ಎಂದು ಈ.ಡಿ. ಬಹಿರಂಗಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಸೆ.30ರಿಂದ ಆರೋಪಿ ವಾಸುದೇವನ್ ಎಸ್ ಅವರನ್ನು ಪಿಎಂಎಲ್‌ಎ- 2002ರ ಸೆಕ್ಷನ್ 19ರ ಅಡಿಯಲ್ಲಿ ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದಲ್ಲದೆ, 2025ರ ಅ.10ರಂದು 423.37 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು, 2026ರ ನ.25ರಂದು 702.70 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಸೇರಿ ಒಟ್ಟು 1126.07 ಕೋಟಿ ರೂ.ಗೆ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಈ.ಡಿ. ಅಧಿಕಾರಿಗಳು ದೋಷಾರೋಪಣಾ ಪಟ್ಟಿಯಲ್ಲಿ ವಿವರಿಸಿದ್ದಾರೆ.