×
Ad

ಬೆಂಗಳೂರು| ಐಷಾರಾಮಿ ಜೀವನ ನಡೆಸಲು ದುಬಾರಿ ಬೆಲೆಯ ಮೊಬೈಲ್‍ಗಳ ಕಳ್ಳತನ: ಮೂವರು ಆರೋಪಿಗಳ ಬಂಧನ

Update: 2025-10-29 21:06 IST

ಸಾಂದರ್ಭಿಕ ಚಿತ್ರ 

ಬೆಂಗಳೂರು: ದುಬಾರಿ ಬೆಲೆಯ ಮೊಬೈಲ್‍ಗಳನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣದಡಿ ಮೂವರು ಆರೋಪಿಗಳನ್ನು ಇಲ್ಲಿನ ವರ್ತೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸಿಕ್ಕಿಂ ಮೂಲದ ದಿವಾಸ್ ಕಮಿ(22), ಆರೋಹನ್ ಥಾಪಾ(28) ಹಾಗೂ ನೇಪಾಳ ಮೂಲದ ಆಸ್ಮಿತಾ(24) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, 40 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಗಳ 39 ಮೊಬೈಲ್ ಫೋನ್‍ಗಳು, 1 ಡಿಜಿಟಲ್ ವಾಚ್, 1 ಡಿಜಿಟಲ್ ಕ್ಯಾಮೆರಾ ವಶಕ್ಕೆ ಪಡೆದಿರುವುದಾಗಿ ಬೆಂಗಳೂರು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಕೆ.ಪರಶುರಾಮ ತಿಳಿಸಿದ್ದಾರೆ.

ಪತಿಯನ್ನು ತೊರೆದಿದ್ದ ಆಸ್ಮಿತಾ, ಸಿಕ್ಕಿಂ ಮೂಲದ ದಿವಾಸ್ ಕಮಿ ಜೊತೆ ಲಿವ್ ಇನ್ ಸಂಬಂಧದಲ್ಲಿ ವಾಸವಿದ್ದಳು. ದಿವಾಸ್ ಕಮಿ ಹಾಗೂ ಆರೋಹನ್ ಥಾಪಾ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದರು. ಆಸ್ಮಿತಾಳ ಜೊತೆ ಐಷಾರಾಮಿ ಜೀವನ ನಡೆಸಲು ಸ್ನೇಹಿತ ಆರೋಹನ್ ಥಾಪಾ ಜೊತೆ ಸೇರಿ ದಿವಾಸ್ ಕಮಿ ದುಬಾರಿ ಬೆಲೆಯ ಮೊಬೈಲ್‍ಗಳನ್ನು ಕಳ್ಳತನ ಮಾಡುತ್ತಿದ್ದ. ಬಳಿಕ ಅವುಗಳನ್ನು ಆಸ್ಮಿತಾಳ ಮೂಲಕ ಆರೋಪಿಗಳಿಬ್ಬರೂ ಮಾರಾಟ ಮಾಡಿಸುತ್ತಿದ್ದರು ಎಂದು ಡಿಸಿಪಿ ಕೆ.ಪರಶುರಾಮ ವಿವರಿಸಿದ್ದಾರೆ.

ಇತ್ತೀಚೆಗೆ ಒಂದೇ ರಾತ್ರಿ ಬೆಳ್ಳಂದೂರು ಹಾಗೂ ವರ್ತೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಗಳಲ್ಲಿರುವ ಎರಡು ಮೊಬೈಲ್ ಶೋ ರೂಮ್‍ಗಳ ಬೀಗ ಮುರಿದು ಒಳನುಗ್ಗಿದ್ದ ಆರೋಪಿಗಳು ಮೊಬೈಲ್‍ಗಳನ್ನು ದೋಚಿ ತುರ್ತು ನಿರ್ಗಮನದ ಬಾಗಿಲಿನ ಮೂಲಕ ಪರಾರಿಯಾಗಿದ್ದರು ಎಂದು ಡಿಸಿಪಿ ಕೆ.ಪರಶುರಾಮ ತಿಳಿಸಿದ್ದಾರೆ.

ಇನ್ನು, ದಿವಾಸ್ ಕಮಿ ವಿರುದ್ಧ ಸಿಕ್ಕಿಂನಲ್ಲಿ ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಒಂದು ಪ್ರಕರಣ ಹಾಗೂ ವೈಟ್‍ಫೀಲ್ಡ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಆರೋಹನ್ ಥಾಪಾ ವಿರುದ್ಧ ವೈಟ್‍ಫೀಲ್ಡ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಆರೋಪಿಗಳು ಬೆಳ್ಳಂದೂರು ವ್ಯಾಪ್ತಿಯಲ್ಲಿ 22 ಹಾಗೂ ವರ್ತೂರು ವ್ಯಾಪ್ತಿಯಲ್ಲಿ 14 ಮೊಬೈಲ್‍ಗಳನ್ನು ಕಳ್ಳತನ ಮಾಡಿದ್ದರು. ಕದ್ದ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಖರೀದಿಸಿದ್ದ ಚಿನ್ನಾಭರಣವನ್ನೂ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಕೆ.ಪರಶುರಾಮ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News