ಆನ್‍ಲೈನ್ ಬೆಟ್ಟಿಂಗ್ ಸಂಸ್ಥೆಗಳಿಗೆ ಸೇರಿದ 442.35 ಕೋಟಿ ರೂ. ಜಪ್ತಿ ಮಾಡಿದ ಈ.ಡಿ.
Photo Credit ; PTI
ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಆರೋಪದಡಿ ರಮ್ಮಿಕಲ್ಚರ್ ನಂತಹ ಆನ್‍ಲೈನ್ ಬೆಟ್ಟಿಂಗ್ ಆಟಗಳು ಮತ್ತು ಪಂದ್ಯಾವಳಿಗಳನ್ನು ನಿರ್ವಹಿಸುತ್ತಿದ್ದ ಗೇಮ್ಸ್ ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಹಾಗೂ ರಮ್ಮಿ ಟೈಮ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳಿಗೆ ಸೇರಿದ ಸುಮಾರು 442.35 ಕೋಟಿ ರೂ.ಗಳನ್ನು ಜಾರಿ ನಿರ್ದೇಶನಾಲಯದ(ಈ.ಡಿ.) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಮೂಲಕ ಈ ಸಂಸ್ಥೆಗಳಿಂದ ಜಪ್ತಿ ಮಾಡಿರುವ ಆಸ್ತಿಯ ಮೌಲ್ಯವು 2,843 ಕೋಟಿ ರೂ.ಗೆ ಏರಿಕೆಯಾಗಿದೆ.
ತೆಲಂಗಾಣದಲ್ಲಿ ಕಾನೂನು ಜಾರಿ ಸಂಸ್ಥೆಗಳು ದಾಖಲಿಸಿದ ಹಲವಾರು ಎಫ್‍ಐಆರ್‍ಗಳ ಆಧಾರದ ಮೇಲೆ, ಜಾರಿ ನಿರ್ದೇಶನಾಲಯವು ಪಿಎಂಎಲ್‍ಎ-2002ರ ನಿಬಂಧನೆಗಳ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿದೆ. ತನಿಖೆ ಭಾಗವಾಗಿ ಅಕ್ರಮ ಆಸ್ತಿಯನ್ನು ಈ.ಡಿ. ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.
ಗೇಮ್ಸ್ ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಹಾಗೂ ರಮ್ಮಿ ಟೈಮ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ರಮ್ಮಿಕಲ್ಚರ್, ರಮ್ಮಿಪ್ರೈಮ್, ಫ್ಲೇಶೀಪ್ ಮತ್ತು ರಮ್ಮಿ ಟೈಮ್ ಸೇರಿದಂತೆ ವಿವಿಧ ಬ್ರಾಂಡ್‍ಗಳ ಅಡಿಯಲ್ಲಿ ಮೊಬೈಲ್ ಅಪ್ಲಿಕೇಶನ್‍ಗಳ ಮೂಲಕ ಆನ್‍ಲೈನ್ ರಮ್ಮಿ ಆಟಗಳು ಮತ್ತು ಪಂದ್ಯಾವಳಿಗಳನ್ನು ನಿರ್ವಹಿಸುತ್ತಿದ್ದವು. ಈ ಪ್ಲಾಟ್‍ಫಾರ್ಮ್‍ಗಳು ದೇಶಾದ್ಯಂತ ಸುಮಾರು 3 ಕೋಟಿ ಬಳಕೆದಾರರನ್ನು ಹೊಂದಿದ್ದು, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ಆನ್‍ಲೈನ್ ರಿಯಲ್-ಮನಿ ಗೇಮಿಂಗ್ ನಿಷೇಧಿತ ರಾಜ್ಯಗಳಲ್ಲಿಯೂ ಗಮನಾರ್ಹ ಸಂಖ್ಯೆಯ ಬಳಕೆದಾರರಿದ್ದರು. ಬಳಕೆದಾರರು ಪಣವಾಗಿ ಕಟ್ಟುವ ಮೊತ್ತದ ಮೇಲೆ ಶೇ.10 ರಿಂದ ಶೇ.15ರಷ್ಟು ಪ್ಲಾಟ್‍ಫಾರ್ಮ್ ಕಮಿಷನ್ ವಿಧಿಸುವ ಮೂಲಕ ಈ ಕಂಪೆನಿಗಳು ಗಣನೀಯ ಆದಾಯವನ್ನು ಗಳಿಸಿವೆ ಎಂದು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.
ಇದಲ್ಲದೆ, ಗೇಮಿಂಗ್ ಪ್ಲಾಟ್‍ಫಾರ್ಮ್‍ಗಳು ಪಾರದರ್ಶಕ, ನ್ಯಾಯಯುತ ಮತ್ತು ಸ್ವಯಂಚಾಲಿತ ಆಟಗಾರರಿಂದ(ಬಾಟ್‍ಗಳು) ಮುಕ್ತವಾಗಿವೆ ಎಂದು ಬಳಕೆದಾರರಿಗೆ ಭರವಸೆ ನೀಡಿದ್ದರೂ, ಈ ಕಂಪೆನಿಗಳು ಅಮಾಯಕ ಬಳಕೆದಾರರಿಗೆ ತಿಳಿಯದಂತೆ ಅಥವಾ ಅವರ ಒಪ್ಪಿಗೆಯಿಲ್ಲದೆ ಬಾಟ್‍ಗಳನ್ನು (ಸ್ವಯಂಚಾಲಿತ ಪ್ರೊ ಗ್ರಾಮ್‍ಗಳು/ಅಲ್ಗಾರಿದಮ್‍ಗಳು) ಬಳಸಿಕೊಂಡಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. ಬಾಟ್‍ಗಳ ಬಳಕೆಯು ಬಳಕೆದಾರರಿಗೆ ಭಾರೀ ಆರ್ಥಿಕ ನಷ್ಟವನ್ನು ಉಂಟುಮಾಡಿದೆ. ಇದು ಕಂಪೆನಿಗಳಿಗೆ ಅಕ್ರಮದ ಮೂಲಕ ಆದಾಯವನ್ನು ತಂದುಕೊಟ್ಟಿದೆ ಎಂದು ಈ.ಡಿ. ದೃಢಪಡಿಸಿದೆ.
ಹೊಸ ಬಳಕೆದಾರರನ್ನು ಪಡೆಯಲು ಕಂಪೆನಿಗಳು ಮಾರ್ಕೆಟಿಂಗ್ ಮತ್ತು ಪ್ರಚಾರ ಅಭಿಯಾನಗಳಿಗೆ ಸುಮಾರು 1,035 ಕೋಟಿ ರೂ. ಖರ್ಚು ಮಾಡಿದ್ದವು. ಹೊಸ ಬಳಕೆದಾರರನ್ನು ಬೋನಸ್‍ಗಳು, ಉಲ್ಲೇಖ ಪ್ರೊ ತ್ಸಾಹಕಗಳು, ಉಚಿತ ಟೂರ್ನಮೆಂಟ್ ನಮೂದುಗಳು ಮತ್ತು ನಿರಂತರ ಗೇಮ್‍ಪ್ಲೇ ಅನ್ನು ಪ್ರೊ ತ್ಸಾಹಿಸಲು ಪ್ರಚಾರ ಬಹುಮಾನಗಳು ಮತ್ತು ಠೇವಣಿಗಳ ಮೂಲಕ ಆಕರ್ಷಿಸಿವೆ. ಕೆಲವು ಸಂದರ್ಭಗಳಲ್ಲಿ ಶೇ.5 ರಿಂದ ಶೇ.10ವರೆಗಿನ ಹಣ ವಾಪಸ್ಸು ಸೇರಿದಂತೆ ನಿರ್ಬಂಧಿತ ವಾಪಸಾತಿ ಕಾರ್ಯವಿಧಾನಗಳನ್ನು ಕಂಪೆನಿಗಳು ವಿಧಿಸಿವೆ. ‘ಸೂಪರ್ ಬೂಸ್ಟರ್’ ಕೊಡುಗೆಗಳ ಮೂಲಕ ಹಿಂಪಡೆಯಬಹುದಾದ ಬ್ಯಾಲೆನ್ಸ್ ಗಳನ್ನು ಹಿಂಪಡೆಯಲಾಗದ ‘ಗೇಮ್ ಕ್ಯಾಶ್’ ಆಗಿ ಪರಿವರ್ತಿಸಲು ಬಳಕೆದಾರರನ್ನು ಪ್ರೇರೇಪಿಸಿವೆ ಎಂದು ಈ.ಡಿ ಆರೋಪಿಸಿದೆ.
ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಿದ ನಂತರ ಆಟವಾಡುವುದನ್ನು ನಿಲ್ಲಿಸಿದವರು ಸೇರಿದಂತೆ ಇತರೆ ಬಳಕೆದಾರರನ್ನು ತ್ವರಿತ ನಗದು ಕ್ರೆಡಿಟ್‍ಗಳು, ಪ್ರಚಾರದ ಕೊಡುಗೆಗಳು, ಪುಶ್ ಅಧಿಸೂಚನೆಗಳು, ಅಭಿಯಾನಗಳು ಮತ್ತು ಟೆಲಿಮಾರ್ಕೆಟಿಂಗ್ ಕರೆಗಳ ಮೂಲಕ ಆಟವನ್ನು ಪುನರಾರಂಭಿಸಲು ಪ್ರೇರೇಪಿಸಲಾಗಿದೆ. ಕಂಪೆನಿಗಳ ಈ ನಿರ್ಲಜ್ಜ ಅಭ್ಯಾಸಗಳು ವ್ಯಸನಕಾರಿ ಗೇಮಿಂಗ್ ವಾತಾವರಣವನ್ನು ಸೃಷ್ಟಿಸಿವೆ. ಇದರಿಂದಾಗಿ ಕಂಪೆನಿಗಳು ಅಕ್ರಮವಾಗಿ ಆದಾಯವನ್ನು ಗಳಿಸಿವೆ ಎಂದು ಈ.ಡಿ. ತನಿಖೆಯಿಂದ ತಿಳಿದು ಬಂದಿದೆ.
ಗಳಿಸಿದ ಆದಾಯವನ್ನುಷೇರುದಾರರಿಗೆ ಲಾಭಾಂಶ (ಡಿವಿಡೆಂಡ್) ಪಾವತಿ ಮತ್ತು ಼ೇರುಗಳ ಮರುಖರೀದಿ ಪ್ರಕ್ರಿಯೆಗಳ ಮೂಲಕ ವಿವಿಧ ಹಂತಗಳಲ್ಲಿ ವರ್ಗಾಯಿಸಲಾಗಿದೆ. ಜೊತೆಗೆ, ಈ ಹಣವನ್ನು ಮ್ಯೂಚುವಲ್ ಫಂಡ್‍ಗಳು, ಬಾಂಡ್‍ಗಳು, ಪರಿವರ್ತಿಸಬಹುದಾದ ನೋಟ್‍ಗಳು, ಈಕ್ವಿಟಿ ಷೇರುಗಳು, ಚರ ಆಸ್ತಿಗಳು ಹಾಗೂ ಹೆಚ್ಚಿನ ಮೌಲ್ಯದ ಸ್ಥಿರ ಆಸ್ತಿಗಳಲ್ಲಿ(ಕುಟುಂಬದ ಟ್ರಸ್ಟ್‍ಗಳು ಮತ್ತು ಸಂಬಂಧಿತ ಸಂಸ್ಥೆಗಳ ಮೂಲಕ ಹೊಂದಿರುವ ಆಸ್ತಿಗಳೂ ಸೇರಿದಂತೆ) ಹೂಡಿಕೆ ಮಾಡುವ ಮೂಲಕ ಮರೆಮಾಚಲಾಗಿದೆ. ಆ ಮೂಲಕ ಅವುಗಳನ್ನು ಕಾನೂನುಬದ್ಧ ಆಸ್ತಿಗಳಂತೆ ಬಿಂಬಿಸಲಾಗಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ.
ಜಪ್ತಿ ಮಾಡಿದ ಒಟ್ಟು ಆಸ್ತಿ ಮೌಲ್ಯವು 2,843 ಕೋಟಿ ರೂ.ಗೆ ಏರಿಕೆ: ಇದಕ್ಕೂ ಮುನ್ನ, ಕಂಪೆನಿಗಳಿಗೆ ಸೇರಿದ ಸುಮಾರು 495 ಕೋಟಿ ರೂ. ಮೌಲ್ಯದ ಚರಾಸ್ತಿಗಳನ್ನು ಸ್ಥಗಿತಗೊಳಿಸಲಾಯಿತು. ಜೊತೆಗೆ 11 ಲಕ್ಷ ರೂ. ನಗದು ಹಾಗೂ ಸುಮಾರು 2.30 ಕೆಜಿ ತೂಕದ ಚಿನ್ನದ ಗಟ್ಟಿಗಳು ಸೇರಿದಂತೆ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಯಿತು. ಸುಮಾರು 1,906 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡುವ ತಾತ್ಕಾಲಿಕ ಆದೇಶವನ್ನು ಹೊರಡಿಸಲಾಗಿತ್ತು. ಇಲ್ಲಿಯವರೆಗೆ ಜಪ್ತಿ ಮಾಡಲಾದ, ಸ್ಥಗಿತಗೊಳಿಸಲಾದ ಮತ್ತು ವಶಪಡಿಸಿಕೊಳ್ಳಲಾದ ಅಕ್ರಮ ಗಳಿಸಿದ ಸಂಪತ್ತಿನ ಒಟ್ಟು ಮೌಲ್ಯವು ಸುಮಾರು 2,843 ಕೋಟಿ ರೂ.ಗಳಷ್ಟಿದೆ ಎಂದು ಈ.ಡಿ. ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.