ಬೆಂಗಳೂರು : ಕರ್ನಾಟಕ ಜೈನ ಧರ್ಮದ ಕರ್ಮ ಭೂಮಿ. ಕರ್ನಾಟಕವನ್ನು ಆಳಿದ ಹೊಯ್ಸಳ, ರಾಷ್ಟ್ರಕೂಟರು, ಕನ್ನಡದ ಆದಿಕವಿ ಪಂಪ ಕೂಡ ಜೈನ ಸಮುದಾಯದವರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.

ಶ್ರೀ ಜ್ಞಾನೋದಯ ದಿಗಂಬರ ಜೈನ ಮಂದಿರ ವತಿಯಿಂದ ವೈಟ್ ಫೀಲ್ಡ್ ನ ತೂಬರಹಳ್ಳಿಯಲ್ಲಿ ರವಿವಾರ ಆಯೋಜಿಸಲಾಗಿದ್ದ ಕ್ಷಮಾವಾಣಿ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ನೀವೆಲ್ಲರೂ ಧರ್ಮ ಗುರುಗಳ ಸಮ್ಮುಖದಲ್ಲಿ ಅವರ ಆಶೀರ್ವಚನ ಕೇಳುತ್ತಿರುವುದು ನಮ್ಮ ಭಾಗ್ಯ. ಪ್ರಪಂಚಕ್ಕೆ ಅಹಿಂಸೆ ಮಹತ್ವ ಸಾರಿದ ಭಗವಾನ್ ಮಹಾವೀರರಿಗೆ ನಮಿಸುತ್ತೇನೆ. ತನ್ನನ್ನು ತಾನು ಜಯಿಸುವವನೇ ನಿಜವಾದ ಜಯಶಾಲಿ ಎಂದು ಮಾರ್ಗದರ್ಶನ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ಅಹಿಂಸೆ ಸರ್ವೋಚ್ಚ ಧರ್ಮ, ಸತ್ಯ ಶಾಶ್ವತ ಎಂದು ಭಗವಾನ್ ಮಹಾವೀರರು ನಮಗೆ ಸಂದೇಶ ನೀಡಿದ್ದಾರೆ ಎಂದು ಅವರು ತಿಳಿಸಿದರು.

ನಾವು ದೇವರನ್ನು ವಿವಿಧ ಹೆಸರಲ್ಲಿ ಕಾಣುವ ಪ್ರಯತ್ನ ಮಾಡುತ್ತೇವೆ. ನಾವು ಬೇರೆಯವರಿಗೆ ತೊಂದರೆ ನೀಡಬಾರದು ಎಂಬ ತತ್ವವನ್ನು ಎಲ್ಲ ಧರ್ಮಗಳು ಸಾರುತ್ತವೆ. ಅಹಿಂಸೆಯೇ ಮೂಲ ತತ್ವ ಎಂದು ಪ್ರತಿಪಾದಿಸಿಕೊಂಡು ಬಂದಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಶ್ರವಣಬೆಳಗೊಳ ಜೈನ ಧರ್ಮದ ಕಾಶಿ: ಕರ್ನಾಟಕದ ಶ್ರವಣಬೆಳಗೊಳ ಜೈನ ಧರ್ಮದ ಕಾಶಿ ಇದ್ದಂತೆ. ನಮ್ಮ ರಾಜ್ಯದಲ್ಲಿ ನೂರಾರು ಜೈನ ತೀರ್ಥಂಕರರ ದೇವಾಲಯಗಳು ಇವೆ ಎಂಬುದನ್ನು ಇತಿಹಾಸ ಹೇಳುತ್ತದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ, ಪ್ರಜಾ ಸೇವಕನಾಗಿ ಜೈನ ಬಾಂಧವರ ಜತೆ ಇದ್ದೇನೆ ಎಂದು ಹೇಳಲು ಬಂದಿದ್ದೇನೆ. ನಿಮ್ಮ ಕಷ್ಟ, ಸುಖ, ಶ್ರಮ ಏನೇ ಇರಲಿ. ನಮ್ಮ ಸರಕಾರ ನಿಮ್ಮ ಜತೆಗಿದೆ ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೈನ ಮುನಿ ಶ್ರೀ 108 ವೀರಸಾಗರ ಮಹಾರಾಜ್, ಶಾಸಕ ಗಣೇಶ್ ಹುಕ್ಕೇರಿ, ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಮೋಹನ್, ಮಾಜಿ ಸಚಿವ ನಾಗೇಶ್, ಕಾಂಗ್ರೆಸ್ ಮುಖಂಡ ಸುಹಾಸ್ ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor