Bengaluru | ನಾಯಿಯನ್ನು ಮುದ್ದಿಸುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ (credit: Grok)
ಬೆಂಗಳೂರು: ಅಪರಿಚಿತನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಪಕಾರ್ ಲೇಔಟ್‍ನಲ್ಲಿ ವರದಿಯಾಗಿದೆ.
ನ.7ರ ರಾತ್ರಿ 10:30ರ ಸುಮಾರಿಗೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಾಕಿಂಗ್‍ಗೆ ಹೋದ ಯುವತಿಯ ಜೊತೆಗಿದ್ದ ನಾಯಿಯನ್ನು ಮುದ್ದಿಸುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿ ಆಕೆಯನ್ನು ಸ್ಪರ್ಶಿಸಿದ್ದಾನೆಂದು ಆರೋಪಿಸಲಾಗಿದೆ. ಈ ಸಂಬಂಧ 25 ವರ್ಷದ ಸಂತ್ರಸ್ತ ಯುವತಿ ನೀಡಿರುವ ದೂರಿನನ್ವಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಯುವತಿ ತಮ್ಮ ಸಾಕು ನಾಯಿಯನ್ನು ಮನೆ ಸಮೀಪದಲ್ಲೇ ವಾಕಿಂಗ್‍ಗೆಂದು ಕರೆದುಕೊಂಡು ಬಂದಿದ್ದರು. ಅವರ ಮುಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ, ‘ನಿಮ್ಮ ನಾಯಿಯನ್ನು ಮುಟ್ಟಬಹುದೇ?’ ಎಂದು ಕೇಳುತ್ತಾ ನಾಯಿಯನ್ನು ಮುದ್ದಿಸಲಾರಂಭಿಸಿದ.
ನಂತರ ಯುವತಿ ಮನೆಗೆ ತೆರಳಲು ಮುಂದಾದಾಗ ಏಕಾಏಕಿ ಆಕೆಯ ದೇಹ ಸ್ಪರ್ಶಿಸಿದ್ದಾನೆ. ಗಾಬರಿಗೊಂಡ ಯುವತಿ ಆರೋಪಿಯನ್ನು ತಳ್ಳುವ ಮೂಲಕ ಪ್ರತಿರೋಧವೊಡ್ಡಿದ್ದರು. ಪುನಃ ಆರೋಪಿ ಕಿರುಕುಳ ನೀಡಲು ಯತ್ನಿಸಿದಾಗ ಆರೋಪಿಗೆ ಯುವತಿ ಕಪಾಳಮೋಕ್ಷ ಮಾಡಿ ಜೋರಾಗಿ ಕಿರುಚಲಾರಂಭಿಸಿದಾಗ, ಕೆಳಕ್ಕೆ ಬಿದ್ದ ಆಕೆಯ ಮೊಬೈಲ್ ತೆಗೆದುಕೊಂಡು ಆರೋಪಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸದ್ಯ, ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗೆ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.