ಬೀದರ್ ನಲ್ಲಿ 556ನೇ ಗುರುನಾನಕ್ ಜಯಂತಿ ಸಂಭ್ರಮದಿಂದ ಆಚರಣೆ
ಬೀದರ : ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ 556ನೇ ಜಯಂತಿಯನ್ನು ಬುಧವಾರ ನಗರದ ಗುರುದ್ವಾರದಲ್ಲಿ ವಿಜೃಂಭಣೆ, ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಇಡೀ ಗುರುದ್ವಾರದ ಪರಿಸರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನಗರದ ಪ್ರಮುಖ ರಸ್ತೆಗಳ ಮಾರ್ಗದುದ್ದಕ್ಕೂ ಸಿಖ್ ಧರ್ಮ ಧ್ವಜಗಳು ಝಗಮಗಿಸಿದವು. ಸಿಖ್ ಧರ್ಮ ಗ್ರಂಥ ಗುರು ಗ್ರಂಥ ಸಾಹಿಬ್ ಪಠಣದೊಂದಿಗೆ ಬೆಳಗ್ಗೆ ಧಾರ್ಮಿಕ ಕೈಂಕರ್ಯಗಳು ಆರಂಭಿಸಲಾಗಿತ್ತು. ಸಾಯಂಕಾಲ ಸಾಲಂಕ್ರತ ವಾಹನದಲ್ಲಿ ಧರ್ಮ ಗ್ರಂಥದ ಮೆರವಣಿಗೆ ಜರುಗಿತು. ಮೆರವಣಿಗೆಗೂ ಮುನ್ನ ಸಿಖ್ ಯುವಕರು ಖಡ್ಗ ಹಿಡಿದು ಗುರುದ್ವಾರ ಗೆಟ್ ವರೆಗೆ ಓಡುತ್ತ ಬರುವ ದೃಶ್ಯ ರೋಮಾಂಚನವಾಗಿತ್ತು.
ಗುರುದ್ವಾರದಿಂದ ನಗರದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆಯಲ್ಲಿ 'ಜೋ ಬೋಲೇ ಸೋ ನಿಹಾಲ್', 'ಸತಶ್ರೀ ಅಕಾಲ್', 'ವಾಹೆ ಗುರುಕಾ ಖಾಲ್ಸಾ', 'ವಾಹೆ ಗುರುಕಾ ಫತೆಹಾ', ಎನ್ನುವ ಘೋಷಣೆಗಳು ಮೊಳಗಿದವು. ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಮೆರವಣಿಗೆಯಲ್ಲಿ ಸಂಭ್ರಮದಿಂದ ಹೆಜ್ಜೆ ಹಾಕಿದರು. ಈ ಮೆರವಣಿಗೆಯಲ್ಲಿ ಎಲ್ಲ ಧರ್ಮದ ಜನರು ಭಾಗವಹಿಸಿ ಸಂಭ್ರಮಪಟ್ಟರು.
ಸಂಸದ ಸಾಗರ್ ಖಂಡ್ರೆ, ಗುರುನಾನಕ್ ಝಿರಾದ ಪ್ರಬಂಧಕ ಕಮಿಟಿಯ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್, ಸದಸ್ಯರಾದ ಮನಪ್ರಿತ್ ಸಿಂಗ್ ಹಾಗೂ ಜಸ್ಪ್ರೀತ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಗುರುದ್ವಾರಕ್ಕೆ ಭೇಟಿ ನೀಡಿದರು.