ಏಡ್ಸ್ ರೋಗ ನಿರ್ಮೂಲನೆಗೆ ಜಾಗೃತಿಯೇ ದಿವ್ಯ ಔಷಧ: ಡಾ. ಮಾರ್ಥಂಡ್ ಖಾಶಂಪುರ್
ಬೀದರ್ : ಏಡ್ಸ್ ರೋಗ ನಿರ್ಮೂಲನೆಗೆ ಜನ ಜಾಗೃತಿಯೇ ದಿವ್ಯ ಔಷಧವಾಗಿದೆ ಎಂದು ಡಾ. ಮಾರ್ಥಂಡ್ ಖಾಶಂಪುರ್ ಅವರು ಅಭಿಪ್ರಾಯಪಟ್ಟರು.
ನಗರದ ಗಾಂಧಿಗಂಜ್ ಪೋಸ್ಟ್ ಆಫೀಸಿನ ಎದುರುಗಡೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರೆವೆನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಶರಣ ತತ್ವ ಪ್ರಸಾರಣ, ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಕಾರ್ಮಿಕ ಇಲಾಖೆಗಳ ವತಿಯಿಂದ ಜಂಟಿಯಾಗಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಟ್ಟಡ, ಕೂಲಿ ಹಾಗೂ ಮುಂತಾದ ಕಾರ್ಮಿಕ ವರ್ಗದವರು ಯಂತ್ರದಂತೆ ಕೆಲಸ ಮಾಡುತ್ತಾ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡದಿರುವುದರಿಂದ ಅನೇಕ ರೋಗ ರುಜಿನಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ವಿಷಯ. ಎಚ್‌ಐವಿ, ಕ್ಷಯ, ಕ್ಯಾನ್ಸರ್ ನಂತಹ ಮುಂತಾದ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಅರಿವಿನ ಕೊರತೆಯಿಂದ ಜನರು ದುಷ್ಟಗಳಿಗೆ ಪಲಿಯಾಗುತ್ತಿದ್ದಾರೆ. ಜನರು ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳೊಂದಿಗೆ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.
ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅಮ್ಜದ್ ಖಾನ್ ಅವರು ಮಾತನಾಡಿ ಕಟ್ಟಡ ಮತ್ತು ಕೂಲಿ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯಿಂದ ದುಬಾರಿ ವೆಚ್ಚದ ಆರೋಗ್ಯ ತಪಾಸಣೆ, ಉಪಕರಣ, ಎಲ್ಲಾ ತರಹದ ಪರೀಕ್ಷೆ, ಇಸಿಜಿ, ಎಕ್ಸರೇ ಮುಂತಾದ ಪರೀಕ್ಷೆಗಳು ನುರಿತ ಅನುಭವಿ ವೈದ್ಯರ ಪ್ರಮುಖದಲ್ಲಿ ಗೀತಾ ಸಂಚಾರಿ ವಾಹನದಲ್ಲಿ ಪರೀಕ್ಷೆ ಮಾಡುತ್ತಿರುವ ಸರ್ಕಾರದ ಯೋಜನೆಯು ಶ್ಲಾಘನೀಯವಾಗಿದೆ ಎಂದು ನುಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಸೂರ್ಯಕಾಂತ್ ಸಂಗೋಳ್ಕರ್ ಅವರು ಮಾತನಾಡಿ, ಕಾರ್ಮಿಕ ವರ್ಗದವರು, ಅಲೆಮಾರಿ ಜನಾಂಗದವರು, ಭಾರಿ ವಾಹನ ಚಾಲಕರು ಎಚ್‌ಐವಿ ಬಗ್ಗೆ ಮಾಹಿತಿಯ ಕೊರತೆಯಿಂದ ಎಚ್‌ಐವಿ ಸೋಂಕಿಗೆ ಬಲಿಯಾಗುತ್ತಿರುವುದು ಕಂಡುಬರುತ್ತದೆ. ಎಚ್ಐವಿ ಬಗ್ಗೆ ಜಾಗೃತರಾಗಿರಿ ಮತ್ತು ರೋಗ ಹರಡುವ ವಿಧಾನ ಗಳ ಬಗ್ಗೆ ಮಾಹಿತಿಯನ್ನು ಪಡೆಯಬೇಕು. ರೋಗವನ್ನು ಶೀಘ್ರ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಸೋಂಕಿತ ವ್ಯಕ್ತಿಯು ಇತರರಂತೆ ಸಾಮಾನ್ಯವಾಗಿ ಬದುಕಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತ ದೆ ಎಂದು ವಿವರಿಸಿದರು.
ಪ್ರಯೋಗಶಾಲಾ ತಂತ್ರಜ್ಞಾನದ ಅರವಿಂದ ಕುಲಕರ್ಣಿ ಅವರು ಮಾತನಾಡಿ, ಎಚ್‌ಐವಿ ಏಡ್ಸ್ ಬಗ್ಗೆ ಅನಗತ್ಯ ಆತಂಕ ಬೇಡ. ಇದು ಕೇವಲ ನಾಲ್ಕು ವಿಧಾನಗಳಲ್ಲಿ ಮಾತ್ರ ಹರಡುವ ರೋಗವಾಗಿದ್ದು ಅಸುರಕ್ಷಿತ ಲೈಂಗಿಕ ಸಂಬಂಧ, ಸೋಂಕಿತ ವ್ಯಕ್ತಿಯ ರಕ್ತ ಪರೀಕ್ಷೆ ಮಾಡದೆ ಪಡೆಯುವುದು, ಸಂಸ್ಕರಿಸಲ್ಪಡದ ಸೂಜಿ ಸಿರಿಂಜ್ ಗಳನ್ನು ಬಳಸುವುದು, ಮಾದಕ ದ್ರವ್ಯಗಳ ಮುಖಾಂತರ ಪಡೆಯುವುದರಿಂದ ಸೋಂಕಿತ ಮಗುವಿಗೆ ಈ ವಿಧಾನಗಳನ್ನು ಬಿಟ್ಟು ಬೇರೆ ಯಾವುದೇ ಮಾರ್ಗದಿಂದ ಎಚ್‌ಐವಿ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಸ್.ಟಿ.ಪಿ ಸಂಸ್ಥೆಯ ಯೋಜನಾ ನಿರ್ದೇಶಕ ಬಸವರಾಜ್ ಖಂಡ್ರೆ, ವ್ಯವಸ್ಥಾಪಕ ಶಿವಕುಮಾರ್, ಆಪ್ತ ಸಮಾಲೋಚಕಿ ವಾಣಿ, ಗಾಳೆಪ್ಪ, ಶರಣಪ್ಪ ಸಂಸ್ಥೆಯ ವ್ಯವಸ್ಥಾಪಕ ಶಿವಕುಮಾರ್ ಬಿ., ಲಕ್ಷ್ಮಿ ವೈದ್ಯ, ವನಮಾಲಾ, ಪ್ರದೀಪಕುಮಾರ್ ಇಮಾನ್ ವೆಲ್, ವಿನೋದ್, ಆನಂದ್ ಪೌಲ್ ಹಾಗೂ ಭಾಗ್ಯಜ್ಯೋತಿ ಸೇರಿದಂತೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.