ಬಿಎಸ್‌ಎಸ್‌ಕೆ ಪುನರ್‌ಚಾಲನೆಗೆ ಕ್ರಮ ಕೈಗೊಳ್ಳಿ: ವಿಧಾನ ಪರಿಷತ್‌ನಲ್ಲಿ ಚಂದ್ರಶೇಖರ ಪಾಟೀಲ್ ಒತ್ತಾಯ
ಹುಮನಾಬಾದ್: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಮುಚ್ಚಿರುವುದರಿಂದ ಜಿಲ್ಲೆಯ ರೈತರು, ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕಾರ್ಖಾನೆಯ ಹರಾಜು ಪ್ರಕ್ರಿಯೆ ಕೈಬಿಟ್ಟು ತಕ್ಷಣ ಪುನರ್‌ಚಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಒತ್ತಾಯಿಸಿದರು.
ಸೋಮವಾರ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಮಾತನಾಡಿದ ಅವರು, ಬಿಎಸ್‌ಎಸ್‌ಕೆ ಸ್ಥಗಿತಗೊಂಡಿರುವುದರಿಂದ ಸಾವಿರಾರು ರೈತರ ಜೀವನಾಧಾರವಾಗಿದ್ದ ಕಬ್ಬು ಬೆಳೆಗೆ ಮಾರುಕಟ್ಟೆ ಸಮಸ್ಯೆ ಎದುರಾಗಿದೆ. ನೂರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ಗಮನಕ್ಕೆ ತಂದರು.
ರೈತರು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಬಿಎಸ್‌ಎಸ್‌ಕೆ ಕಾರ್ಖಾನೆಯ ಹರಾಜು ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಸರ್ಕಾರವೇ ಮುಂದೆ ನಿಂತು ಕಾರ್ಖಾನೆಯನ್ನು ಪುನರ್‌ಚಾಲನೆ ಮಾಡಲು ಅಗತ್ಯ ಅನುದಾನ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಬಿಎಸ್‌ಎಸ್‌ಕೆ ವಿಚಾರ ಗಂಭೀರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ರೈತರು ಹಾಗೂ ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಿಎಸ್‌ಎಸ್‌ಕೆ ಹಲವು ವರ್ಷಗಳಿಂದ ಬೀದರ್ ಜಿಲ್ಲೆಯ ಆರ್ಥಿಕತೆಗೆ ಪ್ರಮುಖ ಆಧಾರವಾಗಿತ್ತು. ಕಾರ್ಖಾನೆ ಸ್ಥಗಿತಗೊಂಡ ಬಳಿಕ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಗ್ರಾಮಗಳ ರೈತರು ಪರ್ಯಾಯ ಮಾರುಕಟ್ಟೆಗಾಗಿ ಪರದಾಡುವಂತಾಗಿದೆ. ಸರ್ಕಾರದ ಮಧ್ಯಸ್ಥಿಕೆಯಿಂದ ಕಾರ್ಖಾನೆ ಪುನರಾರಂಭವಾಗುವ ನಿರೀಕ್ಷೆ ರೈತರಲ್ಲಿ ಮೂಡಿದೆ.