Bidar | ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ

Update: 2026-08-18 17:06 IST

ಬೀದರ್: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಠ ವೇತನ ಜಾರಿ ಸೇರಿದಂತೆ ಪ್ರಮುಖ 13 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ವತಿಯಿಂದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಜುಲೈ 9ರಂದು ಹೋರಾಟ ನಡೆಸಲಾಗಿತ್ತು. ಈ ವೇಳೆ ಇಲಾಖೆಯ ಅಧಿಕಾರಿಗಳು ಬೇಡಿಕೆಗಳಿಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಗಿತ್ತು. ನೌಕರರ ಸಮಸ್ಯೆಗಳಿಗೆ ಸಂಬಂಧಿಸಿದ ಐದು ಕಡತಗಳು ಸಚಿವರ ಬಳಿಗೆ ಕಳುಹಿಸಲಾಗಿದ್ದು, ಅವುಗಳಿಗೆ ಶೀಘ್ರ ಅಂತಿಮ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಲಾಗಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿಗಾರರು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು, ನೀರುಗಂಟಿಗಳು, ಜವಾನರು ಹಾಗೂ ಸ್ವಚ್ಛತಾಗಾರರನ್ನು ಏಕಕಾಲದಲ್ಲಿ ಸರ್ಕಾರಿ ನೌಕರರೆಂದು ಘೋಷಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ವೇತನ ಹೆಚ್ಚಳ ನೀಡಬೇಕು. ಐದು ವರ್ಷ ಸೇವೆ ಸಲ್ಲಿಸಿದವರಿಗೆ 750 ರೂ., 10 ವರ್ಷ ಮೇಲ್ಪಟ್ಟವರಿಗೆ 1,500 ರೂ. ಹಾಗೂ 15 ವರ್ಷ ಮೇಲ್ಪಟ್ಟವರಿಗೆ 3,000 ರೂ. ಇನ್‌ಕ್ರಿಮೆಂಟ್ ನೀಡಬೇಕು ಎಂದು ಆಗ್ರಹಿಸಲಾಗಿದೆ.

ನೌಕರರು ನಿವೃತ್ತರಾದಾಗ ಅಥವಾ ಮೃತಪಟ್ಟಾಗ 6 ಲಕ್ಷ ರೂ. ಇಡಿಗಂಟು ನೀಡಬೇಕು. ಗ್ರಾಮ ಪಂಚಾಯಿತಿ ಠರಾವಿನ ಮೂಲಕ ನೇಮಕಗೊಂಡು ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಬಾಕಿ ಇರುವ ಸಿಬ್ಬಂದಿಗೂ ಇಡಿಗಂಟು ನೀಡಲು ಆದೇಶಿಸಬೇಕು ಎಂದು ಮನವಿ ಮಾಡಲಾಗಿದೆ.

ತರಬೇತಿ ಪಡೆದ ಎಲ್ಲ ಸ್ವಚ್ಛವಾಹಿನಿ ನೌಕರರಿಗೆ ಕೆಲಸ ನೀಡಬೇಕು. ಒಡಂಬಡಿಕೆ ಹಾಗೂ ಪ್ರತಿವರ್ಷ ನವೀಕರಣದ ಪದ್ಧತಿ ರದ್ದುಪಡಿಸಬೇಕು. 15ನೇ ಹಣಕಾಸು ಯೋಜನೆಯಡಿ ವೇತನ ಪಾವತಿಸಬೇಕು. ಪ್ರತಿ ಪಂಚಾಯಿತಿಗೆ ಒಬ್ಬ ಚಾಲಕನನ್ನು ಪರಿಗಣಿಸಿ 15 ಸಾವಿರ ರೂ. ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಮುಂದುವರಿಸಬೇಕು. ಕಂಪ್ಯೂಟರ್ ಜ್ಞಾನ ಹಾಗೂ ಅಗತ್ಯ ವಿದ್ಯಾರ್ಹತೆ ಹೊಂದಿರುವ ಪಂಚಾಯಿತಿ ನೌಕರರಿಗೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅವಕಾಶ ಕಲ್ಪಿಸಬೇಕು. ಪಂಚಾಯಿತಿಗಳ ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಪಡಿಸಿ, 2017ರ ಒಳಗಿನ ಹೆಚ್ಚುವರಿ ಕರವಸೂಲಿಗಾರರಿಗೆ ಅನುಮೋದನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಕರವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ ಹಾಗೂ ಸ್ವಚ್ಛತಾಗಾರರ ಹುದ್ದೆಗಳನ್ನು ಭರ್ತಿ ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು. ಗ್ರೇಡ್-1 ಕಾರ್ಯದರ್ಶಿಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ರಾಜ್ಯಮಟ್ಟದ ಮುಂಬಡ್ತಿ ವ್ಯವಸ್ಥೆ ಕೈಬಿಟ್ಟು ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ ವೃಂದದಿಂದ ಗ್ರೇಡ್-2 ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗೆ ನೇಮಕಗೊಂಡ ನೌಕರರಿಗೆ ಕೆಸಿಎಸ್‌ಆರ್ ನಿಯಮ 325ರಂತೆ ಹಿಂದಿನ ಸೇವೆಯನ್ನು ಪರಿಗಣಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಜನಸಂಖ್ಯೆ ಆಧಾರದ ಮೇಲೆ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಲ್ಲಿ ಶೇ.60ರಷ್ಟು ಸ್ಥಾನಗಳನ್ನು ಗ್ರೇಡ್-1 ಕಾರ್ಯದರ್ಶಿಗಳಿಗೆ ನೀಡಬೇಕು. ಸರ್ಕಾರ ನೌಕರರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಿ ಬಾಕಿ ಇರುವ ಕಡತಗಳಿಗೆ ಅಂತಿಮ ಆದೇಶ ಹೊರಡಿಸುವ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಜೀವನ್ ಕನ್ನಳ್ಳೆ, ಕಾರ್ಯದರ್ಶಿ ಸಂಗಮೇಶ್, ಪ್ರಭು ಸಂತೋಷಕರ್, ವಿಜಯಕುಮಾರ್ ಪಾಟೀಲ್, ಘಾಳೆಪ್ಪಾ ನೌಬಾದೆ, ರಮೇಶ್ ಭಾಲ್ಕೆ ಹಾಗೂ ಸಂಜು ಕೌಠಾ ಸೇರಿದಂತೆ ಇನ್ನಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News