Bidar | ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಧರಣಿ
ಬೀದರ್: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಹಾಗೂ ಅವ್ಯವಹಾರ ಪ್ರಕರಣವನ್ನು ಖಂಡಿಸಿ, ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರದ ಅಂಬೇಡ್ಕರ್ ವೃತ್ತದ ಸಮೀಪದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಧರಣಿಯಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ವಾಲ್ಮೀಕಿ ಅಭಿವೃದ್ಧಿ ನಿಗಮವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಪ್ರಮುಖ ಸಂಸ್ಥೆಯಾಗಿದೆ. ನಿಗಮದ ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿರುವ ಆರೋಪ ಗಂಭೀರವಾಗಿದ್ದು, ಇದರಿಂದ ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.
ಪ್ರಕರಣ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದರೂ ಮುಖ್ಯಮಂತ್ರಿ ನೇತೃತ್ವದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಅವರು ದೂರಿದರು. ಪ್ರಕರಣದ ನೈತಿಕ ಹೊಣೆ ಹೊತ್ತು ಬಿ. ನಾಗೇಂದ್ರ ರಾಜೀನಾಮೆ ನೀಡಬೇಕು. ಅವ್ಯವಹಾರದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಂಡು, ಸಾರ್ವಜನಿಕರ ಹಣವನ್ನು ಸಂಪೂರ್ಣವಾಗಿ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಮಾತನಾಡಿ, ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯುವವರೆಗೆ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ. ವಿಧಾನಸಭೆಯ ಒಳಗೂ ಹಾಗೂ ಹೊರಗೂ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಘುನಾಥರಾವ್ ಮಲ್ಕಾಪುರೆ, ಪೀರಪ್ಪಾ ಯರನಳ್ಳಿ, ವಿಜಯಕುಮಾರ್ ಪಾಟೀಲ್ ಗಾದಗಿ, ಶಶಿಧರ್ ಹೊಸಳ್ಳಿ, ಬಾಬುವಾಲಿ, ಶ್ರೀನಿವಾಸ್ ಚೌದ್ರಿ, ಈಶ್ವರಸಿಂಗ್ ಠಾಕೂರ್, ಗುರುನಾಥ್ ಜಾಂತಿಕರ್, ರಾಜಕುಮಾರ್ ನೇಮತಾಬಾದ್, ದೀಪಕ್ ಗಾದಗೆ, ರಾಜಶೇಖರ್ ನಾಗಮೂರ್ತಿ, ರಾಜು ಚಿದ್ರಿ, ಅಶೋಕ್ ಹೊಕ್ರಾಣೆ, ಮಹೇಶ್ ಪಾಲಂ, ಮಹೇಶ್ವರ್ ಸ್ವಾಮಿ, ರಾಜು ಪೂಜಾರಿ, ಜಗನ್ನಾಥ್ ಜಮಾದಾರ್, ನರೇಶ್ ಗೌಳಿ, ಅನೀಲ್ ಪಸರಗಿ, ಉಲ್ಲಾಸಿನಿ ಮುದಾಳೆ, ಲುಂಬಣಿ ಗೌತಮ್, ಬಿಜೆಪಿ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.