Basavakalyan | ಬೈಕ್‌ಗೆ ಟ್ರಕ್ ವಾಹನ ಢಿಕ್ಕಿ : ಸವಾರ ಸ್ಥಳದಲ್ಲೇ ಮೃತ್ಯು
ಬಸವಕಲ್ಯಾಣ: ತಾಲೂಕಿನ ಮಂಠಾಳ್ ಕ್ರಾಸ್ ಬಳಿ ಟ್ರಕ್ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು ಮಂಠಾಳ್ ಗ್ರಾಮದ ಬಸವರಾಜ್ ಹುಲಸೂರೆ (30) ಎಂದು ಗುರುತಿಸಲಾಗಿದೆ.
ಬಸವರಾಜ್ ಅವರು ಮಂಠಾಳ್ ಗ್ರಾಮದಿಂದ ಬೈಕ್‌ನಲ್ಲಿ ಬಸವಕಲ್ಯಾಣ ನಗರದತ್ತ ಬರುತ್ತಿದ್ದ ವೇಳೆ, ಹೈದ್ರಾಬಾದ್ ಕಡೆಯಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಟ್ರಕ್ ವಾಹನದ ಟೈರ್ ಏಕಾಏಕಿ ಬ್ಲಾಸ್ಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ವಾಹನ ಎದುರಿನಿಂದ ಬರುತ್ತಿದ್ದ ಬಸವರಾಜ್ ಅವರ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಬಸವರಾಜ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.