Bhalki | ಸದೃಢ ಶರೀರ, ಮಾನಸಿಕ ಸಮತೋಲನಕ್ಕೆ ಸಕಾರಾತ್ಮಕ ಚಿಂತನೆ ಅಗತ್ಯ: ನ್ಯಾ.ರಾಜಶೇಖರ್ ಹರಸೂರ್
ಭಾಲ್ಕಿ: ಸದೃಢ ಶರೀರ ಹಾಗೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಸಕಾರಾತ್ಮಕವಾಗಿ ಚಿಂತನೆ ಮಾಡಬೇಕು ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ರಾಜಶೇಖರ್ ಎಸ್. ಹರಸೂರ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಾನೂನು ಅರಿವು-ನೆರವು’ ಮತ್ತು ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನಿನ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿದಾಗ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ಸಾಧ್ಯ. ಸರ್ವೋಚ್ಚ ನ್ಯಾಯಾಲಯದಿಂದ ಹಿಡಿದು ಕೆಳಹಂತದ ಅಧೀನ ನ್ಯಾಯಾಲಯಗಳವರೆಗೆ ವಿವಿಧ ಪ್ರಾಧಿಕಾರಗಳು ಹಾಗೂ ಸಮಿತಿಗಳು ಉಚಿತವಾಗಿ ಕಾರ್ಯನಿರ್ವಹಿಸಿ, ಹಕ್ಕಿನಿಂದ ವಂಚಿತರಾದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿವೆ. ಕಾನೂನು ಸೇವಾ ಸಮಿತಿಗಳು ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಉಚಿತವಾಗಿ ಇತ್ಯರ್ಥಪಡಿಸುತ್ತವೆ ಎಂದರು.
ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಸವಿತಾ ಮಾತನಾಡಿ, ವಿಧವೆಯರು ಹಾಗೂ ಆರ್ಥಿಕವಾಗಿ ದುರ್ಬಲರಾದವರಿಗೆ ಉಚಿತವಾಗಿ ಕಾನೂನು ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಶಿಕಾಂತ್ ಭೂರೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಕಿರಣ್ ಪಾಟೀಲ್, ನ್ಯಾಯವಾದಿ ಶ್ರೀಕಾಂತ್ ಬೋರಾಳೆ, ಅರ್ಬಿಟ್ ಸಂಸ್ಥೆಯ ನಿರ್ದೇಶಕ ಫಾದರ್ ಡೆವಿಡ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಮಹೇಶ್ ರಾಚೋಟೆ, ಉಪಾಧ್ಯಕ್ಷ ಮಕರಂದ್ ಮಾನಕರಿ, ಜಂಟಿ ಕಾರ್ಯದರ್ಶಿ ನೀಲಕಂಠ್ ಬಿರಾದಾರ್, ಡಾ. ವಿಲಾಸ್ ಕನಸೆ ಹಾಗೂ ಡಾ. ವಿಕ್ರಮ ದೇವಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಶೋಕ್ ರಾಜೋಳೆ ಕಾರ್ಯಕ್ರಮ ನಿರೂಪಿಸಿದರು. ಮನೋಶಾಸ್ತ್ರಜ್ಞ ಮಲ್ಲಿಕಾರ್ಜುನ್ ವಂದಿಸಿದರು.