Bhalki | ಸಾಮಾಜಿಕ ಅಸಮಾನತೆ, ಲಿಂಗ ತಾರತಮ್ಯ ಮುಕ್ತ ಭಾರತ ನಮ್ಮ ಗುರಿ : ಡಿ.ಶಿವಶಂಕರಯ್ಯ
ಭಾಲ್ಕಿ: ಸಮಾಜದಲ್ಲಿನ ಸಾಮಾಜಿಕ ಅಸಮಾನತೆ ಮತ್ತು ಲಿಂಗ ತಾರತಮ್ಯವನ್ನು ನಿವಾರಿಸಿ, ಸಮಾನತೆಯ ಭಾರತವನ್ನು ನಿರ್ಮಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ಸಮನ್ವಯ ಕೇಂದ್ರ ಸಮಿತಿಯ ಬೆಂಗಳೂರು ಘಟಕದ ಗೌರವಾಧ್ಯಕ್ಷ ಡಿ.ಶಿವಶಂಕರಯ್ಯ ಹೇಳಿದರು.
ಪಟ್ಟಣದ ಎಂ.ಆರ್.ಎ. ಕಾಲೇಜು ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ಸಮನ್ವಯ ಸಮಿತಿಯ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿಯ ಸೌಲಭ್ಯ ಪಡೆದ ನೌಕರರು ತಮ್ಮ ಕುಟುಂಬದ ಹಿತಕ್ಕೆ ಮಾತ್ರ ಸೀಮಿತವಾಗದೆ, ಸಮಾಜದಲ್ಲಿನ ನೋಂದವರ ಹಾಗೂ ಶೋಷಿತರ ಕಡೆಗೂ ಗಮನ ಹರಿಸಬೇಕು ಎಂದು ಹೇಳಿದರು.
ನಮ್ಮ ರಾಜಕಾರಣಿಗಳು ಲಿಖಿತ ಸಂವಿಧಾನವನ್ನು ಇಲ್ಲವಾಗಿಸಿ, ಅಲಿಖಿತ ಸಂವಿಧಾನವನ್ನು ಜನರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ ಮತ್ತು ಲಿಂಗ ತಾರತಮ್ಯವನ್ನು ತೊಡೆದುಹಾಕಿ ಸಮಾನತೆಯ ಭಾರತವನ್ನು ನಿರ್ಮಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ಸಂವಿಧಾನದ 371ನೇ ವಿಧಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಪ್ರಾದೇಶಿಕವಾಗಿ ಹಿಂದುಳಿದಿರುವ ಈ ಭಾಗದ ಜನರಿಗೆ ನ್ಯಾಯ ದೊರೆಯುವಂತಾಗಬೇಕು. ಕಳೆದ 25 ವರ್ಷಗಳಿಂದ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯ ನಡೆಯುತ್ತಿದ್ದರೂ, ಈವರೆಗೆ ಅದು ಪೂರ್ಣಗೊಂಡಿಲ್ಲ. ಆದ್ದರಿಂದ ಬಾಕಿ ಉಳಿದಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಸಂಬಂಧಿಸಿದಂತೆ, ಐದು ವರ್ಷಗಳ ಸೇವಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಎರಡು ವರ್ಷಗಳ ಸೇವಾ ಅನುಭವದ ಸಡಿಲಿಕೆ ನೀಡುವ 1982ರ ಆದೇಶವನ್ನು ಅನುಷ್ಠಾನಗೊಳಿಸಲು 1957ರ ಸಾಮಾನ್ಯ ನೇಮಕಾತಿ ನಿಯಮದಲ್ಲಿ ಅಗತ್ಯ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಜೇಷ್ಠತಾಪಟ್ಟಿ ಹಾಗೂ ರೋಸ್ಟರ್ ಬಿಂದುಗಳನ್ನು ಸಮರ್ಪಕವಾಗಿ ಅನುಸರಿಸಬೇಕು. ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯಲು ನಿಗದಿಪಡಿಸಿರುವ ಆದಾಯ ಮಿತಿಯನ್ನು 2.50 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ಎನ್‌ಪಿಎಸ್ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಬೇಕು. ಖಾಸಗಿ ಕ್ಷೇತ್ರಗಳಲ್ಲಿಯೂ ಮೀಸಲಾತಿ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಮೋಹನ್, ಬಾಲು, ತಿಪ್ಪಣ್ಣ ಶಿವಪೂರೆ, ನಿರಂಜಪ್ಪ ಪಾತ್ರೆ, ರಾಜಕುಮಾರ್ ಬೊರಸೂರೆ, ಬಾಲಾಜಿ ಕಾಂಬಳೆ, ಮಹೇಂದ್ರ ಸಿಂಗಾರೆ, ಧರ್ಮೇಂದ್ರ ಭೋಸಲೆ, ಪ್ರಶಾಂತಕುಮಾರ್ ಉದ್ದಾ, ವಿಜಯಕುಮಾರ್ ಚಾಂಗಲೇರಾ, ಭೀಮಣ್ಣ ಕೊಂಕಣೆ, ಅನೀಲ್ ಗಾಯಕವಾಡ್, ಪಾಂಡುರಂಗ್ ಬೆಲ್ದಾರ್, ಗಣಪತಿ ಭಕ್ತಾ, ಉಮಾಕಾಂತರಾವ್ ಕಾಂಬಳೆ, ರಮೇಶ್ ಕಾಣೆಕರ್, ಆನಂದ್ ಶಿವನಾಯಕ್ ಹಾಗೂ ನೀಲಕಂಠ್ ಕುರನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.