ಬೀದರ್: ನಗರದ ಐತಿಹಾಸಿಕ ಕರೇಜ್ ಜಲವ್ಯವಸ್ಥೆಯನ್ನು ಸಂರಕ್ಷಿಸಿ, ಅಂತರ್ಜಲ ಮರುಪೂರಣ ಹಾಗೂ ನಗರದಲ್ಲಿ ನೀರಿನ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಮುಂದಾಗಬೇಕು ಎಂದು ಟೀಮ್ ಯುವಾ ಸಹಸಂಸ್ಥಾಪಕ ವಿನಯಕುಮಾರ್ ಮಾಳಗೆ ಮನವಿ ಮಾಡಿದರು.

ಬುಡಾದ ನೂತನ ಅಧ್ಯಕ್ಷ ವಿನೋದ್ ಅಪ್ಪೆ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ಸಂದರ್ಭದಲ್ಲಿ, ನೌಬಾದ್–ಅಲಿಯಾಬಾದ್ ಕರೇಜ್ ಜಲಮಾರ್ಗದ ಅಭಿವೃದ್ಧಿ ಕುರಿತು ಅವರು ಚರ್ಚಿಸಿದರು.

ಕರೇಜ್‌ನ ಐತಿಹಾಸಿಕ ಮಹತ್ವ, ಪ್ರಸ್ತುತ ಸ್ಥಿತಿ, ಜಲಸಂಗ್ರಹಣೆ, ಅಂತರ್ಜಲ ಮರುಪೂರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪರಿಸರ ಸಂರಕ್ಷಣೆಯ ಸಾಧ್ಯತೆಗಳ ಕುರಿತು ಸಭೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಯಿತು. ವಿಷಯವನ್ನು ಆಸಕ್ತಿಯಿಂದ ಆಲಿಸಿದ ಬುಡಾ ಅಧ್ಯಕ್ಷ ವಿನೋದ್ ಅಪ್ಪೆ ಅವರು, ಕರೇಜ್ ವ್ಯವಸ್ಥೆಯ ಮೂಲಕ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.

ಬಹಮನಿ ಕಾಲದಲ್ಲಿ ರೂಪುಗೊಂಡ ಬೀದರ್‌ನ ಕರೇಜ್ ಜಲವ್ಯವಸ್ಥೆಯು ನೆಲದಡಿಯ ಜಲಮಾರ್ಗಗಳ ಮೂಲಕ ನೀರನ್ನು ಸಂಗ್ರಹಿಸಿ ಹರಿಸುವ ಸಾಂಪ್ರದಾಯಿಕ ಜಲತಂತ್ರಜ್ಞಾನದ ವಿಶಿಷ್ಟ ಉದಾಹರಣೆಯಾಗಿದೆ. ನೌಬಾದ್ ಕರೇಜ್ ಮತ್ತು ಅದರ ಜಲಾನಯನ ಪ್ರದೇಶವು ಐತಿಹಾಸಿಕ ಮಹತ್ವದ ಜೊತೆಗೆ ಅಂತರ್ಜಲ ಮರುಪೂರಣದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ ಎಂದು ವಿನಯಕುಮಾರ್ ಮಾಳಗೆ ತಿಳಿಸಿದರು.

ಆದರೆ, ನಗರೀಕರಣ, ಭೂಬಳಕೆಯಲ್ಲಿನ ಬದಲಾವಣೆ, ಅತಿಕ್ರಮಣ ಹಾಗೂ ಜಲಮಾರ್ಗಗಳಿಗೆ ಎದುರಾಗಿರುವ ಅಡೆತಡೆಗಳು ಇಂತಹ ಜಲವ್ಯವಸ್ಥೆಗಳ ಸಂರಕ್ಷಣೆಗೆ ಸವಾಲಾಗಿವೆ. ಹೀಗಾಗಿ, ಕರೇಜ್ ಅಭಿವೃದ್ಧಿಯನ್ನು ಕೇವಲ ಸೌಂದರ್ಯೀಕರಣ ಅಥವಾ ಪ್ರವಾಸೋದ್ಯಮಕ್ಕೆ ಸೀಮಿತಗೊಳಿಸದೆ, ವೈಜ್ಞಾನಿಕ ಅಧ್ಯಯನ, ಮಳೆನೀರು ಸಂಗ್ರಹಣೆ, ಅಂತರ್ಜಲ ಮರುಪೂರಣ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.

ಕರೇಜ್‌ನ ಮೂಲ ರಚನೆಗೆ ಧಕ್ಕೆಯಾಗದಂತೆ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳುವುದು, ನೀರಿನ ಹರಿವಿಗೆ ಇರುವ ಅಡೆತಡೆಗಳನ್ನು ಗುರುತಿಸುವುದು ಹಾಗೂ ಜಲಾನಯನ ಪ್ರದೇಶವನ್ನು ರಕ್ಷಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬುಡಾ ಅಧ್ಯಕ್ಷರು, ಸದಸ್ಯರು, ಆಯುಕ್ತರು ಹಾಗೂ ನಗರ ಮತ್ತು ಪಟ್ಟಣ ಯೋಜನಾ ಇಲಾಖೆಯ ಅಧಿಕಾರಿಗಳೊಂದಿಗೆ ಕರೇಜ್ ಪ್ರದೇಶಕ್ಕೆ ಜಂಟಿ ಸ್ಥಳ ಪರಿಶೀಲನೆ ನಡೆಸುವ ಕುರಿತು ಚರ್ಚಿಸಲಾಯಿತು.

ಈ ಸಭೆಯಲ್ಲಿ ಮೊಹಮ್ಮದ್ ಸಾಮಿ ಹಾಗೂ ಆಯುಕ್ತ ಪ್ರಮೋದ್ ಪಟೇಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor