Bidar | ಹಿಂಗಾರು ಬಿತ್ತನೆ ಬೀಜ ವಿತರಣೆಗೆ ಚಾಲನೆ
ಬೀದರ್: ಜಿಲ್ಲೆಯ ಬೀದರ್ ಉತ್ತರ ಕ್ಷೇತ್ರದ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಕಡಲೆ, ಜೋಳ, ಗೋಧಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ವಿತರಣೆಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಗಿತ್ತೆ ಮಾಧವ ವಿಠಲರಾವ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಸೂಕ್ತ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬರ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರು ಮತ್ತು ಪೋಷಕಾಂಶಗಳನ್ನು ಸಮರ್ಪಕವಾಗಿ ಬಳಸುವುದರ ಜತೆಗೆ, ಕಡಿಮೆ ನೀರು ಅಗತ್ಯವಿರುವ ಬೆಳೆಗಳು ಹಾಗೂ ತಳಿಗಳಿಗೆ ಆದ್ಯತೆ ನೀಡಬೇಕು. ಸರ್ಕಾರದ ವಿವಿಧ ಕೃಷಿ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ, ರೈತರು ಸಮಗ್ರ ಬೇಸಾಯ ಹಾಗೂ ಕೃಷಿ ಭಾಗ್ಯ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಬಿತ್ತನೆಗೂ ಮುನ್ನ ಕಡ್ಡಾಯವಾಗಿ ಬೀಜೋಪಚಾರ ಮತ್ತು ಮೊಳಕೆ ಪರೀಕ್ಷೆ ನಡೆಸಿದ ಬಳಿಕ ಬಿತ್ತನೆ ಮಾಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ್ ಅವರ ಉಪಸ್ಥಿತಿಯಲ್ಲಿ ಹೋಬಳಿಯ ವಿವಿಧ ಗ್ರಾಮಗಳ ರೈತರಿಗೆ ಉಚಿತ ಕಡಲೆ ಮಿನಿ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೀದರ್ ಉತ್ತರ ಹೋಬಳಿಯ ಕೃಷಿ ಅಧಿಕಾರಿ ವರ್ಷಾ ಗಾಯತೊಂಡೆ, ಬಸವರಾಜ್, ಮಹಾನಂದಾ ಸೇರಿದಂತೆ ಕೃಷಿ ಸಖಿಯರು ಹಾಗೂ ಇತರರು ಉಪಸ್ಥಿತರಿದ್ದರು.