ಬೀದರ್: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡೂ ಪಕ್ಷಗಳು ಪರಸ್ಪರ ಶಾಮೀಲಾಗಿ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಅನಿಲ್ ಝಾ ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಉತ್ತರ ಕರ್ನಾಟಕದ ಬೀದರ್, ರಾಯಚೂರು, ಬೆಳಗಾವಿ ಸೇರಿದಂತೆ ಸುಮಾರು 10 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಇದೇ ವೇಳೆ, ಮುಂಬರುವ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಎಎಪಿ ಅಭ್ಯರ್ಥಿಯಾಗಿ ಸಾಯಿಬಣ್ಣ ಜಮಾದಾರ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಕ್ಫ್ ಆಸ್ತಿ ಹಾಗೂ ಭೂ ಹಗರಣಗಳು ನಡೆದಿವೆ ಎಂದು ಆರೋಪಿಸಿದ ಅವರು, ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದರು. ಕಳೆದ 12 ವರ್ಷಗಳಲ್ಲಿ ಎಷ್ಟು ಮಂದಿ ಬಾಂಗ್ಲಾದೇಶೀಯರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ಪ್ರಶ್ನಿಸಿದರು.

ಶಾಸಕರನ್ನು ಖರೀದಿಸುವ ಮೂಲಕ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಮಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಪ್ರತಿ ಎಕರೆಗೆ ಕೇವಲ 2,500 ರೂ. ಪರಿಹಾರ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಇಷ್ಟು ಕಡಿಮೆ ಮೊತ್ತದಲ್ಲಿ ಒಂದು ಎಕರೆ ಜಮೀನಿನಲ್ಲಿ ರೈತರು ಹೇಗೆ ಕೃಷಿ ಮಾಡಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತರು, ದಲಿತರು ಹಾಗೂ ಲಿಂಗಾಯತರು ಸೇರಿದಂತೆ ಎಲ್ಲ ವರ್ಗಗಳ ಜನರು ಈ ಎರಡೂ ಭ್ರಷ್ಟ ಪಕ್ಷಗಳನ್ನು ತಿರಸ್ಕರಿಸಿ, ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎಎಪಿ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಉಪಾಧ್ಯಕ್ಷ ವಿಜಯ್ ಶರ್ಮಾ, ಬೀದರ್ ಜಿಲ್ಲಾಧ್ಯಕ್ಷ ಸಿದ್ದು ಫುಲಾರಿ, ಪ್ರಧಾನ ಕಾರ್ಯದರ್ಶಿ ಎಂ.ಡಿ. ಜಾವೇದ್, ಬೀದರ್-ಕಲಬುರಗಿ-ಯಾದಗಿರಿ ಉಸ್ತುವಾರಿ ಸೈಯದ್ ಜಮೀಲ್ ಹಾಗೂ ಹುಮನಾಬಾದ್‌ನ ಬ್ಯಾಂಕ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor