ಬೀದರ್: ಹಿಂದಿ ಕೇವಲ ಅಭಿವ್ಯಕ್ತಿಯ ಭಾಷೆಯಲ್ಲ; ದೇಶದ ವಿವಿಧ ಭಾಷಾ ಹಾಗೂ ಸಾಂಸ್ಕೃತಿಕ ಪ್ರದೇಶಗಳನ್ನು ಆತ್ಮೀಯತೆಯ ಬಂಧದಲ್ಲಿ ಬೆಸೆಯುವ ಶಕ್ತಿಯುತ ಮಾಧ್ಯಮವಾಗಿದೆ. ಭಾರತದ ಭಾಷಾ ವೈವಿಧ್ಯ ಸಾಂಸ್ಕೃತಿಕ ಶ್ರೀಮಂತಿಕೆಯ ಸಂಕೇತವಾಗಿದ್ದು, ಭಾಷೆಗಳ ನಡುವಿನ ಸಾಹಿತ್ಯಿಕ ವಿನಿಮಯ ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ ಎಂದು ಕೊಂಕಣ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಾಹಿತಿ ಸಂತೋಷಕುಮಾರ್ ಝಾ ಅಭಿಪ್ರಾಯಪಟ್ಟರು.

ನಗರದ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಪ್ರಯಾಗರಾಜ್‌ನ ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥೆ ಹಾಗೂ ಬೀದರ್‌ನ ಗುರುನಾನಕ್ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ 30ನೇ ರಾಷ್ಟ್ರೀಯ ಅಧಿವೇಶನ ಹಾಗೂ 24ನೇ ಹಿಂದಿ ಸಾಹಿತ್ಯ ಮೇಳದಲ್ಲಿ ಅವರು ಮಾತನಾಡಿದರು.

ಹಿಂದಿ ಭಾಷೆ ಮತ್ತು ಸಾಹಿತ್ಯದ ಸಂರಕ್ಷಣೆ, ಸಂವರ್ಧನೆ ಹಾಗೂ ಪ್ರಚಾರಕ್ಕಾಗಿ ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥೆ ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದ ಅವರು, ಬೀದರ್‌ನಲ್ಲಿ ಇಂತಹ ಅಧಿವೇಶನ ಆಯೋಜಿಸಿರುವುದು ಹಿಂದಿ ಹಾಗೂ ದಕ್ಷಿಣ ಭಾರತೀಯ ಭಾಷೆಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದರ ಜತೆಗೆ ಸಾಹಿತಿಗಳು, ಶಿಕ್ಷಣ ತಜ್ಞರು ಮತ್ತು ಯುವ ಪೀಳಿಗೆಗೆ ವಿಚಾರ ವಿನಿಮಯದ ವೇದಿಕೆ ಒದಗಿಸುತ್ತದೆ. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸಾಹಿತ್ಯ ಅಧ್ಯಯನ ಮತ್ತು ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರೇರೇಪಿಸಿದರು.

ಸಂಸ್ಥೆಯ ಕಾರ್ಯದರ್ಶಿ ಡಾ. ಗೋಖಲೇಶ್ವರ್ ಕುಮಾರ್ ದ್ವಿವೇದಿ ಮಾತನಾಡಿ, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳ ನಡುವೆ ಸಾಹಿತ್ಯಿಕ ಸಂವಾದ ಬೆಳೆಸುವುದು, ಸಾಹಿತ್ಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಹಾಗೂ ಹಿಂದಿ ಸೇವೆಯಲ್ಲಿ ಯುವ ಪೀಳಿಗೆಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಡಾ. ರೇಷ್ಮಾ ಕೌರ್ ಮಾತನಾಡಿ, ಹಿಂದಿ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳ ಬೆಳವಣಿಗೆ ಹಾಗೂ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಗುರುನಾನಕ್ ಶಿಕ್ಷಣ ಸಂಸ್ಥೆಗಳ ವತಿಯಿಂದ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ಇಂತಹ ಗೌರವಯುತ ಸಾಹಿತ್ಯಿಕ ಕಾರ್ಯಕ್ರಮ ನಮ್ಮ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಭವಿಷ್ಯದಲ್ಲಿಯೂ ಭಾಷೆ, ಸಾಹಿತ್ಯ, ಶಿಕ್ಷಣ ಹಾಗೂ ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಅಭಿವೃದ್ಧಿಗೆ ಸಂಸ್ಥೆಯ ಸಹಕಾರ ಸದಾ ಇರಲಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಲ್ಬೀರ್ ಸಿಂಗ್ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಡಾ. ವಿಜಯಲಕ್ಷ್ಮಿ ರಾಮಟೇಕೆ, ಆಯೋಜನಾ ಪ್ರಭಾರಿ ಡಾ. ರಂಜಿತ್ ಸಿಂಗ್ ಅರೋರಾ ಅರ್ಷ್, ಆಯೋಜನಾ ಸಹಪ್ರಭಾರಿ ಡಾ. ಸುಮಾ ಟಿ.ಆರ್., ಡಾ. ಕೃಷ್ಣಮಣಿಶ್ರೀ, ಲಕ್ಷ್ಮೀಕಾಂತ ವೈಷ್ಣವ, ಡಾ. ಮುಕ್ತಾ ಕೌಶಿಕ್ ಹಾಗೂ ಡಾ. ಹೇಮಾ ಸುಲ್ತಾನಪುರೇ ಸೇರಿದಂತೆ ಗುರುನಾನಕ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ. ಡಾ. ಭರತ್ ಶೆಣ್ಕರ್ ಸ್ವಾಗತಿಸಿದರು. ಮಂಗಳೂರಿನ ಶ್ರವ್ಯಾ ಎನ್. ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ/ವಾರ್ತಾಭಾರತಿ

ಬೀದರ್ ಜಿಲ್ಲಾ ವರದಿಗಾರರು

ಚಿತ್ರಶೇನ ವ್ಹಿ. ಫುಲೆ ಅವರು 2023ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 2025ರಿಂದ ವಾರ್ತಾಭಾರತಿ ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿರುವ ಇವರು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಬೀದರ್ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ