ಭಾಲ್ಕಿ: ಮಾನವನ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಅತ್ಯವಶ್ಯಕವಾಗಿವೆ. ಜೀವನದಲ್ಲಿ ಉತ್ಸಾಹ ಇರಬೇಕಾದರೆ ಪ್ರತಿಯೊಬ್ಬರಲ್ಲೂ ಕ್ರೀಡಾ ಮನೋಭಾವ ಇರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜಶೇಖರ್ ಎಸ್. ಹರಸೂರ್ ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡಾ ಮನೋಭಾವದೊಂದಿಗೆ ಜೀವನ ಸಾಗಿಸಿದರೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ. ಹವ್ಯಾಸಕ್ಕೂ ಚಟಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮನುಷ್ಯನಲ್ಲಿ ಉತ್ತಮ ಹವ್ಯಾಸಗಳಿರಬೇಕೇ ಹೊರತು ಚಟಗಳಿರಬಾರದು. ಯಾರೂ ಚಟಗಳಿಗೆ ಬಲಿಯಾಗದೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಎಲ್ಲರಲ್ಲೂ ಗೆಲ್ಲಬೇಕೆಂಬ ಆತ್ಮವಿಶ್ವಾಸ ಇರಬೇಕು. ಆದರೆ, ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಬಹುಮುಖ್ಯವಾಗಿದೆ ಎಂದರು.

ಕಿರಿಯ ಶ್ರೇಣಿ ನ್ಯಾಯಾಧೀಶೆ ಸವಿತಾ ಮಾತನಾಡಿ, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಬಹುಮುಖ್ಯವಾಗಿವೆ. ಕ್ರೀಡೆಗಳು ಕೇವಲ ಸ್ಪರ್ಧೆಗಳಿಗೆ ಸೀಮಿತವಾಗದೆ ದೈನಂದಿನ ಜೀವನದ ಭಾಗವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸಹೋದರಿ ರಾಧಾಜಿ ಮಾತನಾಡಿ, ಆಟವನ್ನು ಮನರಂಜನೆಗಾಗಿ ಆಡಬೇಕು. ಸ್ಪರ್ಧೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಮಿತ್ರಭಾವನೆಯಿಂದ ಆಟವಾಡಬೇಕು ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಮಹೇಶ್ ರಾಚೋಟೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು ಹಾಗೂ ಅತಿಥಿಗಳು ಕೇರಂ ಆಟವನ್ನು ಪ್ರಾಯೋಗಿಕವಾಗಿ ಆಡುವ ಮೂಲಕ ಸ್ಪರ್ಧಾಳುಗಳಲ್ಲಿ ಸ್ಫೂರ್ತಿ ತುಂಬಿದರು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ರಾಜಶೇಖರ್ ಅಸ್ಟೂರೆ, ನ್ಯಾಯವಾದಿ ಎನ್.ಬಿ. ಪಾಟೀಲ್, ದಿಲೀಪ್ ಶೇರಿಕಾರ್, ಸಂತೋಷ್ ಬಿಜಿ ಪಾಟೀಲ್, ಸುರೇಶ್ ಕನಶೆಟ್ಟೆ, ಚಂದ್ರಶೇಖರ್ ಎಮ್ಮೆ, ಜಯರಾಜ್ ದಾಬಶೆಟ್ಟಿ, ದೀಪಕ್ ಥಮಕೆ, ಬಾಬುರಾವ್ ಗಾಮಾ, ರಮನ್ ಗಾಯಕವಾಡ್, ಸೂರ್ಯಕಾಂತ್ ಪಾಟೀಲ್, ದಯಾನಂದ್ ಶರ್ಮಾ, ಚಂದ್ರಕಾಂತ್ ಕಾಸಲೆ ಹಾಗೂ ಅನಿಮೇಶ್ ಆನಂದವಾಡೆ ಉಪಸ್ಥಿತರಿದ್ದರು. ವಾಗೇಶ ಪಾಟೀಲ ಸ್ವಾಗತಿಸಿದರು. ಮಕರಂದ ಮಾನಕಾರಿ ನಿರೂಪಿಸಿದರು. ನೀಲಕಂಠ್ ಬಿರಾದಾರ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ/ವಾರ್ತಾಭಾರತಿ

ಬೀದರ್ ಜಿಲ್ಲಾ ವರದಿಗಾರರು

ಚಿತ್ರಶೇನ ವ್ಹಿ. ಫುಲೆ ಅವರು 2023ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 2025ರಿಂದ ವಾರ್ತಾಭಾರತಿ ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿರುವ ಇವರು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಬೀದರ್ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ