ಭಾಲ್ಕಿ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಆರೋಗ್ಯವಂತರಾದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜಶೇಖರ್ ಹರಸೂರ್ ಹೇಳಿದರು.

ತಾಲೂಕಿನ ಭಾತಂಬ್ರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೋಷಣ ಅಭಿಯಾನ ನಿರಂತರವಾಗಿ ನಡೆಯಬೇಕಾದ ಜನಜಾಗೃತಿ ಕಾರ್ಯಕ್ರಮವಾಗಿದೆ. ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಜತೆಗೆ ಅವುಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯ. ಪೋಷಣ ಅಭಿಯಾನ ಕೇವಲ ಕಾರ್ಯಕ್ರಮವಲ್ಲ, ಅದೊಂದು ಜನಾಂದೋಲನವಾಗಿದೆ ಎಂದರು.

ತಾಯಂದಿರ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಮರ್ಪಕವಾಗಿ ಸಾಧ್ಯವಾಗುತ್ತದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದರ ಜೊತೆಗೆ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು. ಆರೋಗ್ಯವಂತ ಮಕ್ಕಳೇ ದೇಶದ ಭವಿಷ್ಯವಾಗಿರುವುದರಿಂದ ಉತ್ತಮ ಆರೋಗ್ಯವಂತ ಪೀಳಿಗೆಯನ್ನು ನಿರ್ಮಿಸುವ ಉದ್ದೇಶದಿಂದ ಪೋಷಣ ಅಭಿಯಾನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನ್ಯಾಯಾಧೀಶೆ ಸವಿತಾ ಮಾತನಾಡಿ, ‘ಆರೋಗ್ಯವೇ ಭಾಗ್ಯ’ ಎಂಬ ಮಾತಿನ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಉತ್ತಮ ಆರೋಗ್ಯವಿಲ್ಲದೆ ಜೀವನದ ಯಾವುದೇ ಸಾಧನೆಯನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿ ಹಾಗೂ ಪೌಷ್ಟಿಕ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹೇಶ್ ರಾಚೋಟೆ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಹರಿದಿನಗಳಲ್ಲಿ ತಯಾರಿಸುವ ವಿಶೇಷ ಅಡುಗೆಗಳು ಕೇವಲ ಆಚರಣೆಗೆ ಸೀಮಿತವಾಗಿರದೆ, ಆರೋಗ್ಯ ಹಾಗೂ ಋತುಮಾನಕ್ಕೆ ಪೂರಕವಾಗಿವೆ. ಪೂರ್ವಜರು ಬಳಸುತ್ತಿದ್ದ ನೈಸರ್ಗಿಕ ಧಾನ್ಯಗಳು ಹಾಗೂ ದೇಸಿ ಆಹಾರ ಪದ್ಧತಿ ವಿಶ್ವಕ್ಕೆ ಮಾದರಿಯಾಗಿತ್ತು. ಆದರೆ ಇಂದಿನ ಫಾಸ್ಟ್‌ಫುಡ್ ಸಂಸ್ಕೃತಿಯಿಂದಾಗಿ ಪೌಷ್ಟಿಕಾಂಶದ ಕೊರತೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸತೀಶ್ ಪಾಟೀಲ್ ವಹಿಸಿದ್ದರು. ವಕೀಲ ವಿಜಯಕುಮಾರ್ ಭೂಸಗುಂಡೆ ಅವರು ಪೌಷ್ಟಿಕತೆ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಸಿಡಿಪಿಒ ಎಂ.ಡಿ. ಖಲೀಲ್, ವಕೀಲರ ಸಂಘದ ಉಪಾಧ್ಯಕ್ಷ ಮಕರಂದ್ ಮಾನಕಾರಿ, ಕಾರ್ಯದರ್ಶಿ ವಾಗೇಶ್ ಪಾಟೀಲ್, ಜಂಟಿ ಕಾರ್ಯದರ್ಶಿ ನೀಲಕಂಠ್ ಬಿರಾದಾರ್, ಹಿರಿಯ ನ್ಯಾಯವಾದಿ ವೆಂಕಟರಾವ್ ಭೂರಾಳೆ, ವಕೀಲರಾದ ಸಂಗಮೇಶ್ ಗಾಮಾ, ಶಿವಶಂಕರ್ ಲದ್ದೆ, ಸಂಗಶೆಟ್ಟಿ ಪಾಟೀಲ್, ಶ್ರೀಕಾಂತ್ ಭೂರಾಳೆ, ಧನರಾಜ್ ಸೋನಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮೇಲ್ವಿಚಾರಕಿ ಆರತಿ ಮೇತ್ರೆ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor