ಬೀದರ್ | ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಮಾಡಿ ಸರ್ಕಾರದ ನಿಯಮ ಪಾಲನೆ ಮಾಡಬೇಕು : ನಾರಾಯಣ ಗೌಡ
ಬೀದರ್ : ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಮಾಡಿ ಸರ್ಕಾರದ ನಿಯಮ ಪಾಲನೆ ಮಾಡಬೇಕು ಎಂದು ಜಿಲ್ಲೆಯ ಎಲ್ಲ ರೀತಿಯ ಉದ್ಯಮಿಗಳಿಗೆ ಹಾಗೂ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಅವರು ಎಚ್ಚರಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಮಾಡಬೇಕು ಎನ್ನುವುದು ಸರ್ಕಾರದ ಕಾಯಿದೆ ಇದೆ. ಸರ್ಕಾರದ ಆ ಕಾಯ್ದೆಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಈ ಕಾಯ್ದೆಯನ್ನು ಪಾಲಿಸದಿದ್ದರೆ ಬೆಂಗಳೂರಿನ ರೀತಿಯಲ್ಲಿ ಬೀದರ್ ಜಿಲ್ಲೆಯಲ್ಲಿಯೂ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಇದು ನಾರಾಯಣ ಗೌಡರ ಕಾಯ್ದೆಯಲ್ಲ, ಸರ್ಕಾರದ ಕಾಯ್ದೆಯಾಗಿದೆ. ಈ ಸರ್ಕಾರದ ಕಾಯ್ದೆಯನ್ನು ಪೊಲೀಸರು ಹಾಗೂ ಮಹಾನಗರ ಪಾಲಿಕೆ ಕೂಡ ಸರಿಯಾಗಿ ಪಾಲಿಸಬೇಕು. ಅಧಿಕಾರಿಗಳು ಮುಂದೆ ನಿಂತು ಕನ್ನಡವಿಲ್ಲದ ನಾಮಫಲಕಗಳನ್ನು ಕಿತ್ತೆಸೆಯಬೇಕು ಎಂದರು.
ಅಧಿಕಾರಿಗಳು ಮುಂದೆ ನಿಂತು ಕನ್ನಡವಿಲ್ಲದ ನಾಮಫಲಕಗಳನ್ನು ಕಿತ್ತೆಸೆಯಬೇಕು. ಅದನ್ನು ಬಿಟ್ಟು ಕನ್ನಡ ಹೋರಾಟಗಾರರ ಮೇಲೆ ಕೇಸು ಹಾಕಿದರೆ ಪೊಲೀಸರ ವಿರುದ್ಧ ಕೂಡ ಹೋರಾಟ ಮಾಡಬೇಕಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಮತ್ತು ಮಹಾನಗರ ಪಾಲಿಕೆಯವರು ಕೂಡಲೇ ಎಚ್ಚೆತ್ತುಕೊಂಡು ಕನ್ನಡವಿಲ್ಲದ ಬೋರ್ಡ್ ಗಳನ್ನು ತೆರವುಗೊಳಿಸುವಂತೆ ಅವರು ಎಚ್ಚರಿಕೆ ನೀಡಿದರು.