×
Ad

ಬೀದರ್ | ಗ್ರಾಪಂ ಅಧ್ಯಕ್ಷರ ಅಧಿಕಾರ ಚಲಾವಣೆ ಆರೋಪ : ಹೆಡಗಾಪೂರ ಗ್ರಾಮ ಪಂಚಾಯತ್ ಪಿಡಿಒ ಮಹಾಲಕ್ಷ್ಮೀ ಅಮಾನತು

Update: 2025-10-30 20:08 IST

ಮಹಾಲಕ್ಷ್ಮೀ

ಬೀದರ್ : ಗ್ರಾಮ ಪಂಚಾಯತ್‌ ಚುನಾಯಿತ ಅಧ್ಯಕ್ಷರ ಅಧಿಕಾರ ಚಲಾಯಿಸಿದ ಆರೋಪದಡಿ ಔರಾದ್ ತಾಲ್ಲೂಕಿನ ಹೆಡಗಾಪುರ ಗ್ರಾಮ ಪಂಚಾಯತ್‌ ಪಿಡಿಒ ಮಹಾಲಕ್ಷ್ಮೀ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪಂಚಾಯತ್‌ ಸಿಇಒ ಡಾ.ಗಿರೀಶ್ ಬದೋಲೆ ಅವರು ಆದೇಶಿಸಿದ್ದಾರೆ.

ಪಿಡಿಒ ಮಹಾಲಕ್ಷ್ಮೀ ಅವರು ನನ್ನ ಗಮನಕ್ಕೆ ತರದೆ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯನ್ನು ಕಾನೂನು ಬಾಹಿರವಾಗಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ನಿಯಮಗಳನ್ನು ಉಲ್ಲಂಘಿಸಿ ಸಾಮಾನ್ಯ ಸಭೆಯನ್ನು ಜರುಗಿಸಿರುವ ಬಗ್ಗೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶೋಭಾ ಜೇಮ್ಸ್ ಅವರು ದೂರು ಸಲ್ಲಿಸಿದ್ದರು.

ಪಂಚಾಯತ್‌ನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳದೆ ಅಧ್ಯಕ್ಷೆ ಹಾಗೂ ಪಿಡಿಒ ಇಬ್ಬರೂ ಸೇರಿ ಸರ್ಕಾರದ ಹಣ ಲೂಟಿ ಮಾಡಿದ್ದಾರೆ. ಗ್ರಾಪಂ ನಡಾವಳಿಯನ್ನು ಮನಸ್ಸಿಗೆ ಬಂದಂತೆ ಪಾಸು ಮಾಡಿದ್ದಾರೆ. ಈ ವಿಷಯದ ಕುರಿತು ವಿಚಾರಿಸಿದಾಗ ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ಉಪಾಧ್ಯಕ್ಷ ಸೈಯದ್ ಶರಫೋದೀನ್ ಅವರು ಕೂಡ ದೂರು ಸಲ್ಲಿಸಿದ್ದರು.

ಅವರ ದೂರಿನ ಅನ್ವಯ ಜಿಪಂ ಆಡಳಿತ ವಿಭಾಗದ ಸಹಾಯಕ ನಿರ್ದೇಶಕ‌ (ಆಡಳಿತ) ಜಯಪ್ರಕಾಶ ಚೌವ್ಹಾಣ ಮತ್ತು ಗ್ರಾಮ ಪಂಚಾಯತ್ ವಿಷಯ ನಿರ್ವಾಹಕ ಹಣಮಂತ್ ಚಿದ್ರಿ ಅವರು ಜಂಟಿಯಾಗಿ ಹೆಡಗಾಪುರ್ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪರಿಶೀಲಿಸಿಲನೆ ನಡೆಸಿ, ವರದಿ ಸಲ್ಲಿಸಿದರು. ಅವರ ವರದಿ ಆಧಾರದ ಮೇಲೆ ಪಿಡಿಒ ಅವರನ್ನು ಅಮಾನತುಗೊಳಿಸಲಾಗಿದೆ.

ಪಿಡಿಒ ಮಹಾಲಕ್ಷ್ಮೀ ಅವರು ಚುನಾಯಿತ ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರ ಚಲಾಯಿಸಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಕರೆಯುವ ಮತ್ತು ಮುಂದೂಡುವ ಕಾರ್ಯ ಮಾಡಿದ ಹಾಗೂ ಕಚೇರಿಯ ಲಿಖಿತ ಸೂಚನೆ ಪಾಲಿಸದೆ ಪ್ರವಾಹದಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿಯೂ ಕೂಡಾ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸದೆ ಇರುವುದು ದೃಢಪಟ್ಟಿದೆ. ಅವರು ಸಲ್ಲಿಸಿದ ವರದಿ ಆಧರಿಸಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

1957ರ ನಿಯಮ - 10(1) (ಡಿ) ಅಡಿ ಪ್ರದತ್ತವಾದ ಅಧಿಕಾರಿವನ್ನು ಚಲಾಯಿಸಿ ಹೆಡಗಾಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಾಲಕ್ಷ್ಮಿ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ. ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡತಕ್ಕದಲ್ಲ. ಕೆ ಸಿ ಎಸ್ ಆರ್ ನಿಯಮ 98ರ ಅನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News