ಬೀದರ್ | ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸಲು ಅಖಿಲ ಭಾರತ ಕಿಸಾನ್ ಸಭಾದಿಂದ ಆಗ್ರಹ
ಬೀದರ್ : ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರ ಹಾಗೂ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ದರ ನಿಗದಿಪಡಿಸುವಂತೆ ಅಖಿಲ ಭಾರತ ಕಿಸಾನ್ ಸಭಾ (AIKS) ಜಿಲ್ಲಾ ಮಂಡಳಿಯಿಂದ ಮನವಿ ಸಲ್ಲಿಸಲಾಯಿತು.
ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ವರ್ಷ ಕಾರ್ಖಾನೆ ಮಾಲಕರು ಕಬ್ಬಿನ ದರ ನಿಗದಿಪಡಿಸದಂತೆ ಕಬ್ಬು ಪೂರೈಸಿದ ರೈತರಿಗೆ ಹಣ ಸಂದಾಯ ಮಾಡಲಿಲ್ಲ. ಕಬ್ಬಿನ ಹಣ ಸಂದಾಯ ಮಾಡಲು ವಿಫಲವಾಗಿರುವುದು ಸಕ್ಕರೆ ಕಾರ್ಖಾನೆಯ ಮಾಲಕರ ಮೇಲೆ ಜಿಲ್ಲಾಡಳಿತವು ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ದೂರಲಾಗಿದೆ.
ಕೆಲವು ಸಕ್ಕರೆ ಕಾರ್ಖಾನೆ ಮಾಲಕರು ರೈತರ ಪಹಣಿ ಪತ್ರಿಕೆ ತೆಗೆದುಕೊಂಡು ಬ್ಯಾಂಕಿನಿಂದ ಸಾಲ ಪಡೆದಿರುತ್ತಾರೆ. ಬ್ಯಾಂಕಿನವರು ಸಾಲದ ಬಾಕಿ ಮೊಬೈಲ್ ಮುಖಾಂತರ ಮರುಪಾವತಿ ಮಾಡಲು ಒತ್ತಾಯಿಸುತ್ತಿದ್ದಾರೆ. ಆದುದ್ದರಿಂದ ಬ್ಯಾಂಕ್ ಅಧಿಕಾರಿಗಳ ಮೇಲೆ ಮತ್ತು ಸಕ್ಕರೆ ಕಾರ್ಖಾನೆಯ ಮೇಲೆ ಅಪರಾಧಿಕ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಕೇಂದ್ರ ಸರಕಾರವು ಕಬ್ಬಿಗೆ ಡಾ.ಸ್ವಾಮಿನಾಥ್ ಆಯೋಗದಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲ್ಲ. ಆದರೆ ಪ್ರತಿ ಕ್ವಿಂಟಲ್ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ 355 ರೂ. ಬೆಲೆ ನಿಗದಿಪಡಿಸಿದೆ. ಅಂದರೆ ಒಂದು ಟನ್ ಕಬ್ಬಿನ ಬೆಲೆ 3,550 ರೂ. ಆಗಿರುತ್ತದೆ. ಈ ಬೆಲೆಯನ್ನು ಅಖಿಲ ಭಾರತ ಕಿಸಾನ್ ಸಭಾ ಒಪ್ಪುವುದಿಲ್ಲ. ರಾಜ್ಯ ಸರಕಾರ ಕೂಡ ಪ್ರೋತ್ಸಾಹ ಧನ ಡಾ.ಸ್ವಾಮಿನಾಥ್ ಆಯೋಗದಂತೆ ಅಂದರೆ FRP ಅರ್ಧ ಹಣ 1,775 ರೂ. ಆಗುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು MSP ಯಂತೆ ಪ್ರತಿ ಟನ್ ಕಬ್ಬಿಗೆ 5,325 ರೂ. ನಿಗದಿಪಡಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ನಝೀರ್ ಅಹಮ್ಮದ್ ಚೋಂಡಿ, ಬೀದರ್ ತಾಲೂಕು ಅಧ್ಯಕ್ಷ ಎಂ.ಡಿ.ಖಮರ್ ಪಟೇಲ್ ಹಾಗೂ ಸದಸ್ಯ ಬಸವರಾಜ್ ಪಟೇಲ್ ಇದ್ದರು.