Bidar | ಆದಾಯ ಮೀರಿ ಆಸ್ತಿಗಳಿಕೆ ಆರೋಪ: ನಿವೃತ್ತ ಕೃಷಿ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ಬೀದರ್: ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ್ ಅವರ ಬೀದರ್, ಹುಮನಾಬಾದ್ ಹಾಗೂ ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ಆಸ್ತಿಗಳ ಮೇಲೆ ಮಂಗಳವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ.
ಲೋಕಾಯುಕ್ತರಿಗೆ ಸಲ್ಲಿಕೆಯಾಗಿದ್ದ ದೂರಿನ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆದಿದ್ದು, ಲೋಕಾಯುಕ್ತ ಎಸ್‌ಪಿ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ ಬೀದರ್ ಡಿವೈಎಸ್‌ಪಿ ಹನುಮಂತರಾಯ ನೇತೃತ್ವದ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಲೋಕಾಯುಕ್ತ ಅಧಿಕಾರಿಗಳು ಬೀದರ್ ನಗರದ ಹಕ್ಕ್ ಕಾಲೋನಿಯಲ್ಲಿರುವ ನಿವಾಸ, ಹುಮನಾಬಾದ್‌ನ ಟೀಚರ್ಸ್ ಕಾಲೋನಿಯಲ್ಲಿರುವ ಮನೆ ಹಾಗೂ ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ದಾಖಲೆಗಳು ಮತ್ತು ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಮಾಣಿಕರಾವ್ ಶೇರಿಕಾರ್ ಅವರು ಕಳೆದ ತಿಂಗಳಷ್ಟೇ ಕೃಷಿ ಇಲಾಖೆಯಿಂದ ನಿವೃತ್ತರಾಗಿದ್ದರು. ಹುಮನಾಬಾದ್‌ನಲ್ಲಿರುವ ಮನೆಯನ್ನು ಬಾಡಿಗೆಗೆ ನೀಡಲಾಗಿದ್ದು, ಬೀದರ್‌ನ ಹಕ್ಕ್ ಕಾಲೋನಿಯಲ್ಲಿ ಅವರು ವಾಸವಾಗಿದ್ದಾರೆ ಎನ್ನಲಾಗಿದೆ.
ಮುತ್ತಂಗಿ ಗ್ರಾಮದಲ್ಲಿರುವ ಅವರ ತೋಟದಲ್ಲಿ ಸುಮಾರು 2,000 ತೋಟಗಾರಿಕೆ ಗಿಡಗಳನ್ನು ನೆಟ್ಟಿದ್ದು, ಕೃಷಿ ಇಲಾಖೆಯ ವಿವಿಧ ಯೋಜನೆಗಳಡಿ ದೊರೆಯುವ ತೋಟಗಾರಿಕೆ ಸಾಮಗ್ರಿಗಳನ್ನು ಬಳಸಿರುವ ಕುರಿತು ಕೂಡ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೀದರ್‌ನ ಹಕ್ಕ್ ಕಾಲೋನಿಯ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಶೋಧ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.